ಬೆಂಗಳೂರು:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ “ವಾರ್ಡ್ ಒನ್” ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ನವೆಂಬರ್ ತಿಂಗಳಾದ್ಯಂತ ವಿಭಾಗವಾರು ಒಂದು ವಾರ್ಡ್ ಆಯ್ಕೆ ಮಾಡಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆಯಿಂದ ಹದಗೆಟ್ಟ ರಸ್ತೆ ದುರಸ್ತಿ, ಗುಂಡಿ ಮುಚ್ಚುವುದು, ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು. ಬೆಸ್ಕಾಂ ಮತ್ತು ಜಲಮಂಡಳಿ ಸಹಯೋಗದಲ್ಲಿ ಜಂಕ್ಷನ್ ಸುಧಾರಣೆ, ಬೀದಿ ದೀಪ ದುರಸ್ತಿ ಮತ್ತು ತ್ಯಾಜ್ಯ ತೆರವು ಕಾರ್ಯ ನಡೆಯಲಿದೆ. ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳ ಸಮಿತಿ ರಚನೆ ಹಾಗೂ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.


















