ಬೆಂಗಳೂರು: ನವೆಂಬರ್ 1ರಿಂದ ಅಡುಗೆ ಅನಿಲ (LPG) ಸಿಲಿಂಡರ್ ಬಳಕೆದಾರರಿಗೆ ಹಲವು ಪ್ರಮುಖ ಬದಲಾವಣೆಗಳು ಮತ್ತು ನಿಯಮಗಳು ಜಾರಿಗೆ ಬರಲಿವೆ. ಇದು ನೇರವಾಗಿ ನಿಮ್ಮ ಮಾಸಿಕ ಮನೆ ಬಜೆಟ್ ಮತ್ತು ಸಿಲಿಂಡರ್ ಬುಕಿಂಗ್ ಮಾಡುವ ವಿಧಾನದ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ನೀವು ನವೆಂಬರ್ 1ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಮಗೆ ಎಲ್ ಪಿಜಿ ಸಿಲಿಂಡರ್ ಸಿಗುವುದಿಲ್ಲ ಎಂಬುದು ತಿಳಿದಿರಬೇಕು.
ಆಧಾರ್ ಇ-ಕೆವೈಸಿ (ಕಡ್ಡಾಯ)
ಸಬ್ಸಿಡಿ ದರದಲ್ಲಿ ಸಿಲಿಂಡರ್ ಪಡೆಯಲು ಬಯಸುವ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ (e-KYC) ಮಾಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದವರು ಮತ್ತೆ ಮಾಡಿಸುವ ಅಗತ್ಯವಿಲ್ಲ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಪರಿಶೀಲನೆ ಮುಗಿಯುವವರೆಗೆ ಸಬ್ಸಿಡಿ ಸಿಲಿಂಡರ್ ಬುಕಿಂಗ್ ತಾತ್ಕಾಲಿಕವಾಗಿ ತಡೆಯಬಹುದು..
ಗ್ರಾಹಕರು ನಿಮ್ಮ ಸಿಲಿಂಡರ್ ಪೂರೈಕೆ ಮಾಡುವವರು, ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಬಹುದು. ಹಾಗೆಯೇ, ಆನ್ ಲೈನ್ ಮೂಲಕವೂ ಇ-ಕೆವೈಸಿ ಮಾಡಿಸಬಹುದು. ಇಂಡೇನ್ ಗ್ಯಾಸ್ ಗಾಗಿ ಇಂಡಿಯನ್ ಆಯಿಲ್ ಒನ್, ಭಾರತ್ ಗ್ಯಾಸ್ ಗಾಗಿ ಹಲೋ ಬಿಪಿಸಿಎಲ್ ಅಥವಾ ಎಚ್ ಪಿ ಗ್ಯಾಸ್ ಗಾಗಿ ಎಚ್ ಪಿ ಪೇ ಮೊಬೈಲ್ ಆ್ಯಪ್ ಗಳ ಮೂಲಕ ಡಿಜಿಟಲ್ ಸ್ವಯಂ-ದೃಢೀಕರಣವನ್ನು ಪೂರ್ಣಗೊಳಿಸಬಹುದು.
ಸಿಲಿಂಡರ್ ಬುಕಿಂಗ್ ನಡುವಿನ ಕಡ್ಡಾಯ ಅಂತರ 25 ದಿನ
ದೇಶಾದ್ಯಂತ ಗ್ರಾಹಕರು ಮುಂದಿನ ಎಲ್ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಲು ಕನಿಷ್ಠ 25 ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಹಾಗೂ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೂ ಈ ನಿಯಮ ಅನ್ವಯಿಸಲಿದೆ. ಹಿಂದೆ ಇದ್ದ 21 ದಿನಗಳ ಮಿತಿಯನ್ನು ಪರಿಷ್ಕರಿಸಿ ಈಗ 25 ದಿನಗಳಿಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ:ನ್ಯೂಜಿಲೆಂಡ್-ಎ ವಿರುದ್ಧ 199 ರನ್ ಸಿಡಿಸಿ ಅಬ್ಬರಿಸಿದ ದೇವದತ್ ಪಡಿಕ್ಕಲ್!



















