ಕೊಡಗು: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17ರ ಇಂದು ಸಂಜೆ 7 ಗಂಟೆ 50 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದೆ. ಭಕ್ತರು ಪುಣ್ಯ ಕ್ಷಣ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇದರ ಅಂಗವಾಗಿ ಮುಂಜಾನೆಯಿಂದಲೇ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆಯಲಿವೆ.
ರಾಜ್ಯ ಹಾಗೂ ಹೊರರಾಜ್ಯದಿಂದ ಸಹಸ್ರಾರು ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್, ಸಿಸಿ ಕ್ಯಾಮರಾ ವ್ಯವಸ್ಥೆ ಹಾಗೂ ಭಾಗಮಂಡಲದಿಂದ ತಲಕಾವೇರಿಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.



















