ಕೊಡಗು : ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದ ಎರಡು ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವನ್ನಪ್ಪಿದೆ ಎನ್ನಲಾಗಿದೆ.
ಮದಗಜಗಳ ಜಗಳದಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಹೀಗಾಗಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಯು ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ನಿನ್ನೆ ನಡೆದ ಜಳಕ ಜಗಳದಲ್ಲಿ ‘ಮಾರ್ತಾಂಡ’ ಆನೆಯು ‘ಕಂಜನ್’ ಆನೆಯ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದೆ. ಮಾರ್ತಾಂಡನ ಹೊಟ್ಟೆಯ ಭಾಗ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾದ ಗಾಯಗಳಾಗಿತ್ತು. ನಿನ್ನೆಯಿಂದಲೇ ಅರಣ್ಯ ಇಲಾಖೆ ಪಶುವೈದ್ಯ ಡಾ. ಮುಜೀಬ್ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಮದಗಜಗಳ ಕಾಳಗದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ನು (33) ಬಲಿಯಾಗಿದ್ದಾರೆ. ದುರಂತದಲ್ಲಿ ಪತ್ನಿ ಕಳೆದುಕೊಂಡ ನೋವಿನಲ್ಲೂಯ ಪತಿ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರವು 20 ಲಕ್ಷ ರೂ. ಪರಿಹಾರ ಘೋಷಿಸಿದೆ.
ಇದನ್ನೂ ಓದಿ : “ಬೀದಿನಾಯಿಗಳ ಕಡಿತ ಕಡೆಗಣಿಸಲು ಸಾಧ್ಯವಿಲ್ಲ” : ರಸ್ತೆಗಳಿಂದ ಶ್ವಾನಗಳ ತೆರವು ಆದೇಶ ಎತ್ತಿಹಿಡಿದ ಸುಪ್ರೀಂ!


















