ಮಡಿಕೇರಿ : ಸಾಕಾನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬಳು ಸಾವಿಗೀಡಾದ ದುರ್ಘಟನೆ ಕೊಡಗಿನ ಕುಶಾಲನಗರ ತಾಲೂಕಿನ ದುಬಾರೆ ಶಿಬಿರದಲ್ಲಿ ನಡೆದಿದೆ. ಚೆನೈ ಮೂಲದ ಜಿನ್ಮು (33) ಸಾವಿಗೀಡಾದ ದುರ್ದೈವಿ.
ಮೇ 18ರ ಬೆಳಿಗ್ಗೆ ಮಹಿಳೆ ಹಾಗೂ ಅವರ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು. ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ.
ಈ ವೇಳೆ ದಂಪತಿ ಸಹ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು. ಆಗ ಮಾರ್ತಾಂಡ ಹಾಗೂ ಕಂಜನ್ ಆನೆಗಳ ನಡುವೆ ನದಿಯಲ್ಲೇ ಕಾದಾಟ ಶುರುವಾಗಿದೆ. ನೋಡು ನೋಡುತ್ತಿದ್ದಂತೆ ಸಾಕಾನೆಗಳ ಕಾದಾಟ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಾರ್ತಾಂಡ ಮಹಿಳೆಯ ಮೇಲೆ ಬಿದ್ದಿದೆ.
ಆನೆ ಬಿದ್ದ ಪರಿಣಾಮ, ಜಿನ್ಮು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್‌ಗೆ ಗಂಭೀರ ಗಾಯಗಳಾಗಿವೆ. ಉಳಿದ ಪ್ರವಾಸಿಗರು ಜೋಯಲ್ ಅವರನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಆನೆಗಳ ಕಾದಾಟದಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ಕಂಜನ್ ಆನೆ ಮೈಸೂರು ದಸರಾದಲ್ಲೂ ಇದೇ ರೀತಿಯಲ್ಲಿ ಗಲಾಟೆ ಮಾಡಿಕೊಂಡು ಅರಮನೆಯಿಂದ ಹೊರಗೆ ಓಡಿ ಬಂದಿತ್ತು. ಇದರಿಂದ ಜನ ಅತಂಕಕ್ಕೆ ಒಳಗಾಗಿದ್ದರು. ದುಬಾರೆ ಸಾಕಾನೆ ಶಿಬಿರದಲ್ಲೂ ಗಲಾಟೆ ಮಾಡಿ ಸಾಕಾನೆಗಳ ಮೇಲೆ ದಾಳಿ ನಡೆಸಿತ್ತು. ಈಗ ಮಾರ್ತಾಂಡನ ಮೇಲೆ ದಾಳಿ ಮಾಡಿ, ಮಹಿಳೆಯ ಸಾವಿಗೆ ಕಾರಣವಾಗಿದೆ.
ಇದನ್ನೂ ಓದಿ : “ನಾನಿಲ್ಲಿ ಟ್ರ್ಯಾಪ್ ಆಗಿದ್ದೇನೆ, ಮಾತಾಡಲು ಆಗುತ್ತಿಲ್ಲ” : ಶವವಾಗಿ ಪತ್ತೆಯಾದ ಮಹಿಳೆಯ ಕೊನೆ ಸಂದೇಶ!



















