ಢಾಕಾ: ಬಾಂಗ್ಲಾದೇಶದಲ್ಲಿ ಧರ್ಮ ನಿಂದನೆ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಗುಂಪು ಥಳಿಸಿ ಕೊಂದ ಘಟನೆ ನಡೆದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂಬ ಆರೋಪದ ಮೇಲೆ ವಹೀದುಝಮಾನ್ ಶಮಿಮ್ (30) ಎಂಬಾತನ ಮೇಲೆ ಸ್ಥಳೀಯ ಗುಂಪೊಂದು ಎರಡು ಬಾರಿ ದಾಳಿ ನಡೆಸಿದ್ದು, ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಬಿಡದೆ ಒಳ ನುಗ್ಗಿದ ದುಷ್ಕರ್ಮಿಗಳು ವಾರ್ಡ್ನಿಂದ ಹೊರಗೆಳೆದು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾರೆ.
ಆಡಿಯೋ ವೈರಲ್ ಬೆನ್ನಲ್ಲೇ ದಾಳಿ
ಬಾಂಗ್ಲಾದೇಶದ ನೈಋತ್ಯ ಭಾಗದಲ್ಲಿರುವ ಸತ್ಖಿರಾ ಜಿಲ್ಲೆಯ ದೆಭತ ಉಪಜಿಲ್ಲೆಯಲ್ಲಿ ಈ ಘಟನೆ ವರೆದಿಯಾಗಿದೆ. ವಹೀದುಝಮಾನ್ ಶಮಿಮ್ ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಗಳವಾರ ಸಂಜೆ 4.30ರ ಸುಮಾರಿಗೆ ಶಮಿಮ್ ಅವರನ್ನು ಸ್ಥಳೀಯರು ಸುತ್ತುವರಿದು ಥಳಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ದೆಭತ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ವ್ಯಕ್ತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ದೆಭತ ಉಪಜಿಲ್ಲಾ ಆರೋಗ್ಯ ಸಂಕೀರ್ಣಕ್ಕೆ ದಾಖಲಿಸಿದ್ದರು.
ಆಸ್ಪತ್ರೆಗೆ ನುಗ್ಗಿ ವಾರ್ಡ್ನಿಂದ ಹೊರಗೆಳೆದ ದುಷ್ಕರ್ಮಿಗಳು
ಆದರೆ ಚಿಕಿತ್ಸೆ ಪಡೆಯುತ್ತಿದ್ದರೂ ಶಮಿಮ್ ಮೇಲಿನ ಆಕ್ರೋಶ ಕಮ್ಮಿಯಾಗಿರಲಿಲ್ಲ. ರಾತ್ರಿ ವೇಳೆ 200 ರಿಂದ 250 ಜನರ ಗುಂಪು ಆಸ್ಪತ್ರೆಯ ಮುಂದೆ ಜಮಾಯಿಸಿದೆ. ಸ್ಥಳದಲ್ಲಿದ್ದ ಪೊಲೀಸರು, ಅನ್ಸಾರ್ ಭದ್ರತಾ ಸಿಬ್ಬಂದಿ ಹಾಗೂ ವೈದ್ಯರು ತಡೆದರೂ ಯಾವುದನ್ನೂ ಲೆಕ್ಕಿಸದೆ ಗುಂಪು ಆಸ್ಪತ್ರೆಯ ಹಿಂಬಾಗಿಲನ್ನು ಒಡೆದು ಒಳ ನುಗ್ಗಿದೆ. ನೇರವಾಗಿ ವಾರ್ಡ್ಗೆ ತೆರಳಿದ ದುಷ್ಕರ್ಮಿಗಳು ಶಮಿಮ್ ಅವರನ್ನು ಇತರ ರೋಗಿಗಳೆದುರೇ ಬಲವಂತವಾಗಿ ಹೊರಗೆಳೆದು ಮತ್ತೆ ಅಮಾನುಷವಾಗಿ ಥಳಿಸಿದೆ. ಈ ಎರಡನೇ ಹಂತದ ಭೀಕರ ಹಲ್ಲೆಯಿಂದ ಶಮಿಮ್ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸತ್ಖಿರಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಬುಧವಾರ ನಸುಕಿನ 1 ಗಂಟೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸತ್ಖಿರಾ ಸ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮಾನಸಿಕ ಅಸ್ಥಿರತೆ
ಮೃತ ಶಮಿಮ್ ಜಗನ್ನಾಥ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ಪಡೆದಿದ್ದರು. ಸುಮಾರು ಒಂದು ವರ್ಷದ ಹಿಂದೆ ಢಾಕಾದಿಂದ ಮನೆಗೆ ಮರಳುವಾಗ ದರೋಡೆಕೋರರ ಗುಂಪೊಂದು ಅವರಿಗೆ ಮದ್ದು ನೀಡಿ ದೋಚಿದ ನಂತರ ಅವರ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು ಎಂದು ಅವರ ಹಿರಿಯ ಸಹೋದರ ಅಬ್ದುಲ್ ಜಲೀಲ್ ತಿಳಿಸಿದ್ದಾರೆ. ವೈರಲ್ ಆದ ಆಡಿಯೋದಿಂದಾಗಿ ಬೆದರಿಕೆಗಳು ಹೆಚ್ಚಾಗಿದ್ದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದ ಶಮಿಮ್, ಘಟನೆ ದಿನದಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ಯುತ್ತಿದ್ದ ಮಾರ್ಗಮಧ್ಯೆ ಸಖಿಪುರ ಪ್ರದೇಶದಲ್ಲಿ ಗುಂಪೊಂದು ಅವರ ಮೇಲೆ ಮೊದಲ ಹಂತದ ಹಲ್ಲೆ ನಡೆಸಿತ್ತು. ಸದ್ಯ ಈ ಭೀಕರ ಹತ್ಯಾಕಾಂಡದ ಕುರಿತು ಮೃತರ ಕುಟುಂಬದಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲವೆಂದೂ, ದೂರು ಸ್ವೀಕರಿಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮದುವೆಗೆ ಪೀಡಿಸಿದ ಪ್ರೇಯಸಿಯ ತಲೆಯ ಮೇಲೆ ಹೊಡೆದು ರೂಮ್ ಹೀಟರ್ನಿಂದ ಸುಟ್ಟು ಕೊಂದ ಪ್ರೇಮಿ!



















