ಬೀಜಿಂಗ್: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ಪ್ರಭುತ್ವಕ್ಕೆ ಸೆಡ್ಡು ಹೊಡೆಯಲು ಚೀನಾ ಮತ್ತೊಂದು ಬೃಹತ್ ಹೆಜ್ಜೆ ಇಟ್ಟಿದೆ. ಗಣಿತ ಹಾಗೂ ಸಂಕೀರ್ಣ ಸಂಶೋಧನಾ ಕ್ಷೇತ್ರದಲ್ಲಿ ಅಮೆರಿಕದ ‘ಓಪನ್‌ಎಐ’ ಹಾಗೂ ‘ಆಂಥ್ರೋಪಿಕ್’ ಸಂಸ್ಥೆಗಳನ್ನು ಮೀರಿಸಲು ಚೀನಾ 1,000ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಗಣಿತಜ್ಞರನ್ನೊಳಗೊಂಡ ವಿಶೇಷ ‘ಎಐ ಮೈತ್ರಿಕೂಟ’ವನ್ನು ರಚಿಸಿದೆ.
ಫೀಲ್ಡ್ಸ್ ಪದಕ ವಿಜೇತ ಯೌ ನೇತೃತ್ವ
ಪ್ರಸಿದ್ಧ ಗಣಿತಜ್ಞ ಹಾಗೂ ಫೀಲ್ಡ್ಸ್ ಪದಕ ವಿಜೇತ ಶಿಂಗ್-ತುಂಗ್ ಯೌ ಅವರ ನೇತೃತ್ವದಲ್ಲಿ ಬೀಜಿಂಗ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ‘ದಿ ಯೌ ಲ್ಯಾಬೊರೇಟರಿ ಅಲಯನ್ಸ್ ಫಾರ್ ಮ್ಯಾಥಮ್ಯಾಟಿಕ್ಸ್ ಅಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಹೆಸರಿನ ಈ ಮೈತ್ರಿಕೂಟದಲ್ಲಿ ದೇಶದ 8 ಪ್ರಮುಖ ಸಂಶೋಧನಾ ಸಂಸ್ಥೆಗಳು ಕೈಜೋಡಿಸಿವೆ. ಮುಂಚೂಣಿ ವಿಜ್ಞಾನ ಮತ್ತು ಗಣಿತ ಸಂಶೋಧನೆಯಲ್ಲಿ ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದು ಈ ಮೈತ್ರಿಕೂಟದ ಮುಖ್ಯ ಉದ್ದೇಶವಾಗಿದೆ.
“ಗಣಿತ ಕ್ಷೇತ್ರದಲ್ಲಿ ಎಐ ಒಂದು ಸುನಾಮಿ”
ಈ ಮೈತ್ರಿಕೂಟದ ಕುರಿತು ಮಾತನಾಡಿದ ಶಿಂಗ್-ತುಂಗ್ ಯೌ, ಗಣಿತ ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯನ್ನು ಸುನಾಮಿಗೆ ಹೋಲಿಸಿದ್ದಾರೆ. ಪ್ರಸ್ತುತ ಎಐ ತಂತ್ರಜ್ಞಾನದ ಬಳಕೆಯಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ದೊಡ್ಡ ಅಂತರವಿದ್ದು, ಅದನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗಣಿತಕ್ಕಾಗಿ ಪ್ರತ್ಯೇಕ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವುದು, ಸಂಕೀರ್ಣ ಸಿದ್ಧಾಂತ ಹಾಗೂ ಪ್ರಮೇಯಗಳನ್ನು ಭೇದಿಸಲು ಎಐ ಬಳಸುವುದು ಈ ಪಡೆಯ ಆದ್ಯತೆಯಾಗಿದೆ.
ಓಪನ್‌ಎಐ ಜಾಗತಿಕ ಸವಾಲು
ಇತ್ತೀಚೆಗಷ್ಟೇ ಓಪನ್‌ಎಐ ಸಂಸ್ಥೆಯು ‘ನೇವಿಯರ್-ಸ್ಟೋಕ್ಸ್’ ಗಣಿತ ಸವಾಲು ಸೇರಿದಂತೆ 377ಕ್ಕೂ ಹೆಚ್ಚು ಸಂಕೀರ್ಣ ಗಣಿತದ ಸಮಸ್ಯೆಗಳನ್ನು ಎಐ ಮೂಲಕ ಬಿಡಿಸಿರುವುದಾಗಿ ಘೋಷಿಸಿ 700ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬಿಡುಗಡೆ ಮಾಡಿತ್ತು. ಸಾಮಾನ್ಯ ಬಳಕೆಯ ಎಐ ಮಾದರಿಗಳಲ್ಲಿ ಚೀನಾ ಉತ್ತಮ ಸಾಧನೆ ಮಾಡುತ್ತಿದ್ದರೂ, ಗಣಿತ ಮತ್ತು ಭೌತಶಾಸ್ತ್ರದಂತಹ ಉನ್ನತ ಸಂಶೋಧನೆಗಳಲ್ಲಿ ಅಮೆರಿಕದ ಸಂಸ್ಥೆಗಳಿಗಿಂತ ಹಿಂದುಳಿದಿದೆ. ಹೀಗಾಗಿ, ಅಮೆರಿಕದ ತಾಂತ್ರಿಕ ಮೇಲುಗೈಗೆ ಸವಾಲೆಸೆಯಲು ಚೀನಾ ಈ ಬೃಹತ್ ಪಡೆಗಳನ್ನು ರಂಗಕ್ಕಿಳಿಸಿದೆ.
ಇದನ್ನೂ ಓದಿ:ರಾಹುಲ್ ಗಾಂಧಿ ತಮ್ಮನ್ನು ನೂಕಿದರು ಎಂದು ಗರ್ಭಿಣಿ ಪತ್ರಕರ್ತೆ ಆರೋಪ : ಬಿಜೆಪಿ-ಕಾಂಗ್ರೆಸ್ ವಾಕ್ಸಮರ!

















