ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್ ಮಧ್ಯಂತರ ಚುನಾವಣೆಯ ಹೊಸ್ತಿಲಲ್ಲೇ ಇಂಧನ ದರ ಏರಿಕೆಯು ತೀವ್ರ ರಾಜಕೀಯ ಕ್ರಾಂತಿಗೆ ಕಾರಣವಾಗಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಡೀಸೆಲ್ ಅಭಾವ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ರಷ್ಯಾದ ಮೊರೆ ಹೋಗುವ ಮೂಲಕ ಭಾರಿ ಯೂಟರ್ನ್ ಹೊಡೆದಿದ್ದಾರೆ. ಈ ನಿರ್ಧಾರವು ಜಾಗತಿಕ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಟ್ರಂಪ್-ಪುಟಿನ್ ಮಾತುಕತೆ ಬೆನ್ನಲ್ಲೇ ಡೀಸೆಲ್ ಪೂರೈಕೆ ಒಪ್ಪಂದ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನಡೆಸಿದ “ಅತ್ಯಂತ ಯಶಸ್ವಿ” ಮಾತುಕತೆಯ ನಂತರ ಟ್ರಂಪ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಒಪ್ಪಂದದ ಪ್ರಕಾರ, ರಷ್ಯಾ ತಕ್ಷಣವೇ 3 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ ಪೂರೈಸಲಿದ್ದು, ನವೆಂಬರ್ನಲ್ಲಿ ಹೆಚ್ಚುವರಿ 5 ಲಕ್ಷ ಮೆಟ್ರಿಕ್ ಟನ್ ಹಾಗೂ ತದನಂತರ 10 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಸರಬರಾಜು ಮಾಡಲಿದೆ. ಅಮೆರಿಕನ್ನರು, ವಿಶೇಷವಾಗಿ ರೈತರು ಮತ್ತು ಸಾರಿಗೆ ರಂಗದ ಮೇಲಿನ ಹೊರೆ ತಗ್ಗಿಸುವುದೇ ತಮ್ಮ ಮೊದಲ ಆದ್ಯತೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಖಜಾನೆ ಇಲಾಖೆಯು ಏಪ್ರಿಲ್ 7 ರವರೆಗೆ ರಷ್ಯಾದಿಂದ ಡೀಸೆಲ್ ಆಮದಿಗೆ ಅನುಮತಿ ನೀಡುವ ಸಾಮಾನ್ಯ ಪರವಾನಗಿಯನ್ನು ನೀಡಿದೆ.
ಟ್ರಂಪ್ ನಿರ್ಧಾರಕ್ಕೆ ಝೆಲೆನ್ಸ್ಕಿ ತೀವ್ರ ಆಕ್ರೋಶ
ಅಮೆರಿಕದ ಈ ತೀರ್ಮಾನವನ್ನು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವುದು ಯುದ್ಧವನ್ನು ಕೊನೆಗೊಳಿಸುವ ಬದಲು ಅದನ್ನು ಮುಂದುವರಿಸಲು ಪೂಟಿನ್ ಸರ್ಕಾರಕ್ಕೆ ಹೂಡಿಕೆ ಮಾಡಿದಂತೆ. “ಪುಟಿನ್ಗೆ ನೀಡುವ ಇಂತಹ ಕೊಡುಗೆಗಳು ನಾಗರಿಕ ಜಗತ್ತಿಗೆ ಶಾಂತಿ ಅಥವಾ ಯಾವುದೇ ಪ್ರಯೋಜನವನ್ನು ತರುವುದಿಲ್ಲ; ರಷ್ಯಾ ಈ ಡೀಸೆಲ್ ಹಣವನ್ನು ಉಕ್ರೇನ್ ವಿರುದ್ಧ ಮತ್ತಷ್ಟು ಭಯೋತ್ಪಾದನೆ ಎಸಗಲು ಬಳಸಿಕೊಳ್ಳುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುದ್ಧವನ್ನು ನಿಲ್ಲಿಸಲು ಅಮೆರಿಕದಲ್ಲಿ ಉಕ್ರೇನ್ ನಿಯೋಗ ಚರ್ಚೆ ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಅನ್ಯಾಯ ಎಂದಿರುವ ಅವರು, ಬಲವಾದ ಪಾಲುದಾರರಿಂದ ಬಂದ “ದುರ್ಬಲ ನಿರ್ಧಾರ” ಎಂದು ಬಣ್ಣಿಸಿದ್ದಾರೆ.
ಇಂಧನ ಬಿಕ್ಕಟ್ಟಿಗೆ ಅಮೆರಿಕ-ಇಸ್ರೇಲ್ ಯುದ್ಧವೇ ಕಾರಣವೇ?
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಆರಂಭಿಸಿರುವ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ತೀವ್ರ ಕೊರತೆ ಎದುರಾಗಿದೆ. ಅಮೆರಿಕದಲ್ಲಿ ಡೀಸೆಲ್ ಬೆಲೆಯು ಶೇಕಡಾ 70 ರಷ್ಟು ಜಿಗಿತ ಕಂಡಿದ್ದು, ಪ್ರಸ್ತುತ ಗ್ಯಾಲನ್ಗೆ 6.27 ಡಾಲರ್ಗಿಂತಲೂ ಹೆಚ್ಚಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಟ್ರಂಪ್ ಆಡಳಿತವು ಶೀತಲ ಸಮರದ ಕಾಲದ ‘ಡಿಫೆನ್ಸ್ ಪ್ರೊಡಕ್ಷನ್ ಆಕ್ಟ್’ ಜಾರಿಗೆ ತರಲು ಮತ್ತು ದೇಶೀಯ ತೈಲ ಉತ್ಪಾದನೆಯನ್ನು ಹೆಚ್ಚಿಸಲು ಪರಿಶೀಲಿಸುತ್ತಿದೆ. ಈ ನಡುವೆ, ರಷ್ಯಾದಿಂದ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದ ಪ್ರಕಟವಾಗುತ್ತಿದ್ದಂತೆ ಅಮೆರಿಕದ ಡೀಸೆಲ್ ಫ್ಯೂಚರ್ಸ್ ಶೇಕಡಾ 4.8 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
ಇದನ್ನೂ ಓದಿ :ದೆಹಲಿ ಪ್ರತಿಭಟನೆಗೂ ಮುನ್ನವೇ ಬಿಗ್ ಶಾಕ್: ಗುರುಗ್ರಾಮದ ನಿವಾಸದಲ್ಲೇ ಖ್ಯಾತ ಯೂಟ್ಯೂಬರ್ ಧ್ರುವ ರಾಠೀ ವಶಕ್ಕೆ!



















