ಬೆಂಗಳೂರು : ಸುರಕ್ಷಿತ ಹಾಗೂ ಸರ್ಕಾರದ ಬೆಂಬಲವಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಹೂಡಿಕೆದಾರರ ಹಣಕ್ಕೆ ನಿಗದಿತ ಬಡ್ಡಿ ದರವನ್ನು ನೀಡಲಿದ್ದು, ಮುಕ್ತಾಯದ ಅವಧಿಯಲ್ಲಿ ಡೆಪಾಸಿಟ್ ಮಾಡಿದ ಹಣವನ್ನು ದುಪ್ಪಟ್ಟು ಮಾಡುತ್ತದೆ. ಹಾಗಾದರೆ, ನೀವು 1 ಲಕ್ಷ ರೂ. ಹೂಡಿಕೆ ಮಾಡಿ, ಅದು 2 ಲಕ್ಷ ರೂ. ಆಗಲು ಎಷ್ಟು ದಿನ ಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಬಡ್ಡಿ ದರ ಮತ್ತು ಮೆಚ್ಯುರಿಟಿ ಅವಧಿ
ಪ್ರಸ್ತುತ ಕಿಸಾನ್ ವಿಕಾಸ್ ಪತ್ರ ಯೋಜನೆಗೆ ವಾರ್ಷಿಕ 7.5% ಬಡ್ಡಿ ದರವನ್ನು (ವಾರ್ಷಿಕವಾಗಿ ಸಂಯೋಜಿತ – Compounded Yearly) ನೀಡಲಾಗುತ್ತಿದೆ. ಈ ಬಡ್ಡಿ ದರದ ಪ್ರಕಾರ, ಹೂಡಿಕೆ ಮಾಡಿದ ಹಣವು 115 ತಿಂಗಳಲ್ಲಿ (9 ವರ್ಷ 7 ತಿಂಗಳು) ದುಪ್ಪಟ್ಟಾಗುತ್ತದೆ. ನೀವು 1 ಲಕ್ಷ ರೂ. ಹೂಡಿಕೆ ಮಾಡಿದರೆ, 2 ಲಕ್ಷ ರೂ., 2 ಲಕ್ಷ ರೂ. ಹೂಡಿಕೆ ಮಾಡಿದರೆ 4 ಲಕ್ಷ ರೂಪಾಯಿ… ಹೀಗೆ ಹೂಡಿಕೆ ಮಾಡಿದ ಹಣವು 115 ತಿಂಗಳಲ್ಲಿ ಎರಡು ಪಟ್ಟು ಆಗುತ್ತದೆ.
ಯಾರೆಲ್ಲಾ ಹೂಡಿಕೆ ಮಾಡಬಹುದು?
ಭಾರತೀಯ ನಿವಾಸಿಗಳು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಒಬ್ಬರು ಅಥವಾ ಮೂವರವರೆಗೆ ಸೇರಿ ಜಂಟಿ ಖಾತೆ ಪ್ರಾರಂಭಿಸಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರ ಹೆಸರಿನಲ್ಲೂ ಖಾತೆ ತೆರೆಯಲು ಅವಕಾಶವಿದೆ. ಕನಿಷ್ಠ 1 ಸಾವಿರ ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.
ಪ್ರಿ-ಮೆಚ್ಯೂರ್ ಹಿಂಪಡೆಯುವಿಕೆ ನಿಯಮಗಳು
ಕೆವಿಪಿ ಯೋಜನೆಯು ದೀರ್ಘಾವಧಿಯ ಹೂಡಿಕೆಯಾಗಿದ್ದರೂ, ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ (ಖಾತೆದಾರರ ಸಾವು ಅಥವಾ ನ್ಯಾಯಾಲಯದ ಆದೇಶದಂತೆ) ಅವಧಿಗೂ ಮುನ್ನ ಖಾತೆ ಕ್ಲೋಸ್ ಮಾಡಲು ಅವಕಾಶವಿದೆ. ಸಾಮಾನ್ಯ ನಿಯಮಗಳ ಪ್ರಕಾರ, 2 ವರ್ಷ 6 ತಿಂಗಳ (30 ತಿಂಗಳು) ನಂತರ ಹಣ ಹಿಂಪಡೆದರೆ ನಿಯಮಾನುಸಾರ ಅಸಲು ಮತ್ತು ಬಡ್ಡಿ ಮೊತ್ತ ದೊರೆಯುತ್ತದೆ. ಅಲ್ಲದೆ, ಈ ಸರ್ಟಿಫಿಕೇಟ್ ಗಳನ್ನು ಬ್ಯಾಂಕ್ ಸಾಲಗಳಿಗೆ ಶ್ಯೂರಿಟಿಯಾಗಿ ಅಥವಾ ಪ್ಲೆಡ್ಜ್ ಮಾಡಲು ಬಳಸಬಹುದಾಗಿದೆ.
ಇದನ್ನೂ ಓದಿ :247 ಪ್ರಾಂಶುಪಾಲರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


















