ಮುಂಬೈ : ಅತಿಯಾದ ವೇಗದಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಮುಂಬೈನ ಕೋಸ್ಟಲ್ ರಸ್ತೆಯಲ್ಲಿ ನಡೆದಿದೆ. ಈ ಭೀಕರ ಅವಘಡದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ 3 ಮಂದಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಗಂಟೆ ಸುಮಾರಿಗೆ ಈ ಭಯಾನಕ ಅವಘಡ ಸಂಭವಿಸಿದ್ದರಿಂದ ಹೆಚ್ಚಿನ ಸಾವು ನೋವು ತಪ್ಪಿದೆ.
ಮೆರೈನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ಸಂಚರಿಸುತ್ತಿದ್ದ ಕಾರು ಕೋಸ್ಟಲ್ ರಸ್ತೆಯ ಮೇಲ್ಸೇತುವೆಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹೊರಕ್ಕೆ ಹಾರಿ ಸೇತುವೆಯ ಕೆಳಗಿನ ರಸ್ತೆಗೆ ಅಪ್ಪಳಿಸಿದೆ. ಪರಿಣಾಮ ಕಾರಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಈ ಅವಘಡದ ವಿಡಿಯೋ ಸೆರೆಯಾಗಿದೆ. ಸೇತುವೆಯಿಂದ ಹೊರಬಿದ್ದ ಕಾರು ಗಾಳಿಯಲ್ಲಿ ಎರಡು ಬಾರಿ ಪಲ್ಟಿಯಾಗಿ, ನೆಲಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ನಾಲ್ವರನ್ನು ಹೊರತೆಗೆದಿದ್ದಾರೆ. ಬಳಿಕ ಎಲ್ಲರನ್ನೂ ಸಮೀಪದ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೂವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಕಾರಣ ಪತ್ತೆಗೆ ಪೊಲೀಸರ ತನಿಖೆ
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರನ್ನು ಯಾರು ಚಲಾಯಿಸುತ್ತಿದ್ದರು, ಅಪಘಾತ ಸಂಭವಿಸುವ ಮುನ್ನ ವಾಹನದ ವೇಗ ಎಷ್ಟಿತ್ತು, ಚಾಲಕನ ನಿಯಂತ್ರಣ ಏಕೆ ತಪ್ಪಿತು, ಘಟನೆಯ ವೇಳೆ ಕಾರಿನಲ್ಲಿದ್ದವರ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ | ಬೆಳ್ಳಿಯಿಂದ ಭಾರತದ ಪದಕ ಬೇಟೆಗೆ ಚಾಲನೆ ; 10 ಮೀಟರ್ ಏರ್ ರೈಫಲ್‌ನಲ್ಲಿ ಶೂಟರ್‌ಗಳ ಮಿಂಚು



















