ತಿರುಮಲ : ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಲಡ್ಡು ಪ್ರಸಾದ ವಿವಾದ ಮತ್ತೆ ಸುದ್ದಿಯಲ್ಲಿದೆ. ಪವಿತ್ರ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ಮಾಡಿದ ಆರೋಪ ಹಾಗೂ ಗಂಭೀರ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.), ಸುಕೃತಿ ಫುಡ್ಸ್ ಸಂಸ್ಥೆಯ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಎಂಬಾತನನ್ನು ಬಂಧಿಸಿದೆ. ವಿಶಾಖಪಟ್ಟಣದ ವಿಶೇಷ ಪಿಎಮ್ಎಲ್ಎ (PMLA) ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತುಪ್ಪಕ್ಕೆ ತಾಳೆ ಎಣ್ಣೆ, ರಾಸಾಯನಿಕಗಳ ಬಳಕೆ
ಟಿಟಿಡಿಗೆ ‘ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹಸುವಿನ ತುಪ್ಪ’ ಎಂದು ಸರಬರಾಜು ಮಾಡಲಾದ ಉತ್ಪನ್ನವನ್ನು ಸಂಪೂರ್ಣವಾಗಿ ಕಲಬೆರಕೆ ಮಾಡಿ ತಯಾರಿಸಲಾಗಿತ್ತು ಎಂಬುದು ಇ.ಡಿ. ತನಿಖೆಯಲ್ಲಿ ಬಯಲಾಗಿದೆ. ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನೆಲ್ ಆಯಿಲ್, ಪಾಮೋಲಿನ್ ಸೇರಿದಂತೆ ಎಂಜಿ-90, ಮೋನೋಗ್ಲಿಸರೈಡ್ಸ್, ಮೈವ್ಯಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆ್ಯಸಿಡ್ ಎಸ್ಟೇಟ್ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಹಸುವಿನ ತುಪ್ಪದಂತೆ ಬಿಂಬಿಸಿ ಸರಬರಾಜು ಮಾಡಲಾಗಿತ್ತು ಎಂದು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.
230 ಕೋಟಿ ರೂ. ಮೌಲ್ಯದ ವಂಚನೆ
ಇ.ಡಿ. ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, 2019 ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ಅಂದಾಜು 230 ಕೋಟಿ ರೂ. ಮೌಲ್ಯದ ನಕಲಿ ಮತ್ತು ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ. ಇದರಲ್ಲಿ ಬಂಧಿತ ಆರೋಪಿ ಕೈಲಾಶ್ ಚಂದ್ ಮಂಗ್ಲಾ ಒಬ್ಬನೇ ತನ್ನ ಕಾರ್ಖಾನೆಯ ಆವರಣದಲ್ಲಿ ಸುಮಾರು 96 ಕೋಟಿ ರೂ. ಮೌಲ್ಯದ ಕಲಬೆರಕೆ ತುಪ್ಪವನ್ನು ಉತ್ಪಾದಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಸಂಚು ಕೋರರಲ್ಲಿ ಒಬ್ಬನಾಗಿದ್ದ ಈತ, ಕಲಬೆರಕೆ ಪದಾರ್ಥಗಳನ್ನು ಸಂಗ್ರಹಿಸಿ ನಕಲಿ ತುಪ್ಪ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಖೊಟ್ಟಿ ದಾಖಲೆ ಸೃಷ್ಟಿಸಿ ವಂಚನೆ
ಆರೋಪಿ ಮಂಗ್ಲಾ ತನ್ನ ಅಕ್ರಮವನ್ನು ಮುಚ್ಚಿಹಾಕಲು ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್, ಮಾಲ್ಗಂಗಾ ಮಿಲ್ಕ್ & ಆಗ್ರೋ ಪ್ರೊಡಕ್ಟ್ಸ್ ಮತ್ತು ಎ.ಆರ್. ಡೈರಿ ಫುಡ್ಸ್ನಂತಹ ವಿವಿಧ ಶೋ-ಕೇಸ್ (ಫ್ರಂಟ್) ಸಂಸ್ಥೆಗಳ ಮೂಲಕ ಈ ನಕಲಿ ತುಪ್ಪವನ್ನು ಸರಬರಾಜು ಮಾಡಲು ಸಂಯೋಜನೆ ನಡೆಸುತ್ತಿದ್ದ. ನಿಜವಾದ ಹಸುವಿನ ತುಪ್ಪವನ್ನೇ ಉತ್ಪಾದಿಸಿ ಪೂರೈಸಲಾಗುತ್ತಿದೆ ಎಂದು ಬಿಂಬಿಸಲು, ಸಂಸ್ಕರಿಸಿದ ಪಾಮ್ ಆಯಿಲ್ ಖರೀದಿ ಹಾಗೂ ಮಾರಾಟದ ಕುರಿತು ನಕಲಿ ದಾಖಲೆಗಳು ಮತ್ತು ಲೆಕ್ಕಪತ್ರಗಳನ್ನು ಸೃಷ್ಟಿಸಿದ್ದ ಎಂದು ಇಡಿ ಆರೋಪಿಸಿದೆ.
ಮುಂದುವರಿದ ಇ.ಡಿ. ತನಿಖಾ ಜಾಲ
ತಿರುಪತಿ ಲಡ್ಡು ಪ್ರಸಾದದ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಈ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದಕ್ಕೂ ಮುನ್ನ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ಮಿಲ್ಕ್ ಪ್ರವರ್ತಕ ಹಾಗೂ ನಿರ್ದೇಶಕ ವಿಪಿನ್ ಜೈನ್ ಎಂಬಾತನನ್ನು ಇದೇ ರೀತಿಯ ಗಂಭೀರ ಆರೋಪಗಳ ಮೇಲೆ ಬಂಧಿಸಲಾಗಿತ್ತು. ಇದೀಗ ಕೈಲಾಶ್ ಚಂದ್ ಮಂಗ್ಲಾ ಬಂಧನದೊಂದಿಗೆ, ಟಿಟಿಡಿಗೆ ಪೂರೈಸಲಾದ ಹಸುವಿನ ತುಪ್ಪದಲ್ಲಿ ವ್ಯಾಪಕ ಪ್ರಮಾಣದ ರಾಸಾಯನಿಕ ಹಾಗೂ ಅಡುಗೆ ಎಣ್ಣೆ ಕಲಬರಕೆ ನಡೆದಿರುವುದು ಸಾಕ್ಷ್ಯಾಧಾರ ಸಮೇತ ದೃಢಪಟ್ಟಂತಾಗಿದೆ.
ಇದನ್ನೂ ಓದಿ : ಕೆಪಿಎಸ್ಸಿ ಹಗರಣದಲ್ಲಿ ಮಹತ್ವದ ಬೆಳವಣಿಗೆ | ಕಿಂಗ್ಪಿನ್ ಕನ್ನಾಳೆ, ಜ್ಞಾನೇಂದ್ರನನ್ನು ಬಂಧಿಸಿದ ED!


















