ಬೆಂಗಳೂರು : ಕೇಂದ್ರ ಸರ್ಕಾರವು ಏಕೀಕೃತ ಪಾವತಿ ವ್ಯವಸ್ಥೆಗೆ (UPI) ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಎಂಬ ಶುಲ್ಕವನ್ನು ಪರಿಚಯಿಸಿದೆ. ಯಾವುದಾದರೂ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿ ಮಾಡಿದರೆ ಶೇ.0.4ರಷ್ಟು ಎಂಡಿಆರ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ, ಎಂಡಿಆರ್ ಶುಲ್ಕವನ್ನು ವ್ಯಾಪಾರಿಗಳೇ ಪಾವತಿಸಬೇಕು ಎಂದು ಸರ್ಕಾರ ತಿಳಿಸಿದೆ. ಇದರ ಹೊರತಾಗಿಯೂ ಅಂಗಡಿಯವರು ಗ್ರಾಹಕರಿಗೇ ಎಂಡಿಆರ್ ಶುಲ್ಕ ಪಾವತಿಸಬೇಕು ಎಂದು ಕೇಳಿದರೆ ಏನು ಮಾಡಬೇಕು? ಇದಕ್ಕೂ ಸರ್ಕಾರ ಪರಿಹಾರ ಸೂಚಿಸಿದೆ.
2 ಸಾವಿರ ರೂಪಾಯಿವರೆಗಿನ ಯಾವುದೇ ಯುಪಿಐ ವಹಿವಾಟು ಹಾಗೂ ರೂಪೇ ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳ ಮೇಲೆ ಯಾವುದೇ ರೀತಿಯ ಸೇವಾ ಶುಲ್ಕ ಅಥವಾ ಎಂಡಿಆರ್ ವಿಧಿಸಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲ ಬ್ಯಾಂಕ್ ಗಳು, ಮರ್ಚೆಂಟ್ ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗೊಂದು ವೇಳೆ, ವ್ಯಾಪಾರಿಗಳು ಗ್ರಾಹಕರಿಂದ ಶುಲ್ಕ ಕೇಳಿದರೆ ಗ್ರಾಹಕರು ಆಗ ದೂರು ನೀಡಬಹುದು.
ದೂರು ನೀಡುವುದು ಹೇಗೆ?
ಉದಾಹರಣೆಗೆ ನೀವು 2 ಸಾವಿರ ರೂ. ಮೌಲ್ಯದ ವಸ್ತು ಖರೀದಿಸಿದ್ದೀರಿ. ನೀವು ಈಗ 2 ಸಾವಿರ ರೂ. ಯುಪಿಐ ಮಾಡಬೇಕು. ಆಗ ವ್ಯಾಪಾರಿಯು ಇಲ್ಲ ನೀವು 2,008 ರೂ. ನೀಡಬೇಕು ಎಂದರೆ, ಕೂಡಲೇ ನೀವು ಮೈ ಯುಪಿಐ ಪೋರ್ಟಲ್ ಗೆ ಭೇಟಿ ನೀಡಿ ಹೆಚ್ಚುವರಿ ಶುಲ್ಕ ಕೇಳಿರುವ ಕುರಿತು ದೂರು ನೀಡಬಹುದು.
ಹಾಗೆಯೇ, ನೀವು ಬಳಸುವ ಯುಪಿಐ ಆ್ಯಪ್ ಮೂಲಕವೂ ದೂರು ನೀಡಬಹುದು. ನಿಮ್ಮ ಬ್ಯಾಂಕ್ಅನ್ನು ಸಂಪರ್ಕಿಸಿ ಎಂಡಿಆರ್ ಕೇಳಿದ ಅಂಗಡಿ ಹೆಸರು, ಮಾಲೀಕನ ಹೆಸರು, ಸಾಧ್ಯವಾದರೆ ಲೊಕೇಷನ್ ಕಳುಹಿಸುವ ಮೂಲಕ ದೂರು ನೀಡಬಹುದಾಗಿದೆ. ಇದಾದ ಬಳಿಕ ವ್ಯಾಪಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿರುವ IIScಯಲ್ಲಿ 4 ಹುದ್ದೆಗಳ ನೇಮಕಾತಿ : 29 ಸಾವಿರ ರೂ. ಸ್ಯಾಲರಿ


















