ಬೆಂಗಳೂರು : ನಕಲಿ ಮೆಡಿಕಲ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಹೆಲ್ತ್‌ಕೇರ್ ಹಾಗೂ ಕೃಪಾ ಫಾರ್ಮಾ ಸಂಸ್ಥೆಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ಬೃಹತ್ ದಾಳಿ ನಡೆಸಿ ಸತತ 12 ಗಂಟೆಗಳ ಕಾಲ ಕರ್ಯಾಚರಣೆ ನಡೆಸಿದ್ದಾರೆ. ಸಿಐಡಿ ಡಿವೈಎಸ್‌ಪಿ ಅಂಜನ್ ಕುಮಾರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ತಡರಾತ್ರಿ 11 ಗಂಟೆಗೆ ಅಂತ್ಯಗೊಂಡಿದ್ದು, ದಾಳಿ ವೇಳೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಧಿಕ ಪ್ರಮಾಣದ ಔಷಧಗಳು ಹಾಗೂ ಹಲವು ಮಹತ್ವದ ನಕಲಿ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಕಲಿ ಮೆಡಿಕಲ್ ಮಾಫಿಯಾ ಪ್ರಕರಣದ ತನಿಖೆಯ ಭಾಗವಾಗಿ ಕೃಪಾ ಹೆಲ್ತ್‌ಕೇರ್ ಮತ್ತು ಕೃಪಾ ಫಾರ್ಮಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆಯಿಂದ ಆರಂಭಗೊಂಡಿದ್ದ ದಾಳಿ ಸತತ 12 ಗಂಟೆಗಳ ಕಾಲ ಮುಂದುವರಿದಿದ್ದು, ಸಂಸ್ಥೆಯ ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳು ಮತ್ತು ಔಷಧಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಹೆಚ್ಚಿನ ಪ್ರಮಾಣದ ಔಷಧಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಪ್ರಕರಣದ ತನಿಖೆಗೆ ಪ್ರಮುಖವಾಗಬಹುದಾದ ಹಲವು ನಕಲಿ ದಾಖಲೆಗಳನ್ನೂ ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇನ್ನು ಎಸ್‌ಐಟಿ ದಾಳಿ ಮುಕ್ತಾಯಗೊಂಡ ಬೆನ್ನಲ್ಲೇ ಕೃಪಾ ಫಾರ್ಮಾ ಸಂಸ್ಥೆಯ ಮಾಲೀಕ ವೀರೆಶ್‌ನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಶಪಡಿಸಿಕೊಂಡಿರುವ ಔಷಧಗಳು ಹಾಗೂ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಬಂಧಿತ ಆರೋಪಿ ವೀರೆಶ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಗಿದೆ.
ದಾಳಿ ವೇಳೆ ಸಿಕ್ಕಿರುವ ದಾಖಲೆಗಳು ಮತ್ತು ಔಷಧಗಳ ಮೂಲ, ಅವುಗಳ ದಾಸ್ತಾನು ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಅಕ್ರಮ ಜಾಲದಲ್ಲಿ ವೀರೆಶ್ ಪಾತ್ರವೇನು, ನಕಲಿ ದಾಖಲೆಗಳನ್ನು ಹೇಗೆ ಸೃಷ್ಟಿಸಲಾಗುತ್ತಿತ್ತು ಹಾಗೂ ಅಕ್ರಮ ಔಷಧ ದಾಸ್ತಾನಿನ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ. ನಕಲಿ ಮೆಡಿಕಲ್ ಮಾಫಿಯಾ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಂಧನವಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : ದಸರಾ ಚಲನಚಿತ್ರೋತ್ಸವಕ್ಕೆ ಕೊಕ್ ; ಕಂಬಳಕ್ಕಾಗಿ ಚಿತ್ರೋತ್ಸವ ಬಲಿ? ಕಲಾಪ್ರೇಮಿಗಳ ವಿರೋಧ!


















