ಮುಂಬೈ : ಇತ್ತೀಚೆಗೆ ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆದ ಸ್ಥಳದ ಸಮೀಪ ಪ್ರಧಾನಮಂತ್ರಿ ಕಾರ್ಯಾಲಯದ (PMO) ನಕಲಿ ಗುರುತಿನ ಚೀಟಿಯೊಂದಿಗೆ ಬಂಧಿತನಾದ ಯುವಕನ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ನಿಶ್ಚಿತಾರ್ಥಗೊಂಡ ಯುವತಿ ಮತ್ತು ಭಾವಿ ಅತ್ತೆ-ಮಾವಂದಿರಿಗೆ ತಾನು ಪ್ರಧಾನಿ ಕಚೇರಿಯಲ್ಲಿ ಉನ್ನತ ಅಧಿಕಾರ ಹೊಂದಿದ್ದೇನೆ ಎಂದು ತೋರಿಸಿಕೊಂಡು ಪ್ರಭಾವ ಬೀರಲು ಈತ ಈ ನಾಟಕವಾಡಿದ್ದ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಐ ತಂತ್ರಜ್ಞಾನ ಬಳಸಿ ನಕಲಿ ಐಡಿ ಕಾರ್ಡ್ ಸೃಷ್ಟಿ
ಬಂಧಿತ 24 ವರ್ಷದ ರೋಹನ್ ಪಾರಿಖ್, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಕೇಂದ್ರ ಸರ್ಕಾರದಲ್ಲಿ ತನಗೆ ಭಾರೀ ಪ್ರಭಾವವಿದೆ ಎಂದು ಭಾವೀ ಅತ್ತೆ-ಮಾವನಿಗೆ ನಂಬಿಸಲು ಯೋಜಿಸಿದ್ದ ಈತ, 2025ರಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಪಿಎಂಒ ಅಧಿಕೃತ ಕಾರ್ಡ್ನಂತೆಯೇ ಕಾಣುವ ನಕಲಿ ಐಡಿ ಕಾರ್ಡ್ ರೂಪಿಸಿದ್ದ. ಇತ್ತೀಚೆಗೆ ಪ್ರಧಾನಿ ಮೋದಿಯವರ ಕಾರ್ಯಕ್ರಮ ನಡೆದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಎನ್ಎಂಎಸಿಸಿ (NMACC) ಮತ್ತು ಜಿಯೋ ವರ್ಲ್ಡ್ ಪ್ಲಾಜಾ ಜಾಗಕ್ಕೆ ತೆರಳಿ, ವಿವಿಐಪಿ ದ್ವಾರದ ಮೂಲಕ ಪ್ರವೇಶಿಸಿ ತನ್ನ ಪ್ರಭಾವವನ್ನು ತೋರಿಸಿಕೊಳ್ಳುವುದು ಈತನ ಯೋಜನೆಯಾಗಿತ್ತು. ಇದಕ್ಕಾಗಿ ಈತ ಮೊದಲೇ ಎರಡು ಬಾರಿ ಸ್ಥಳದ ಪರಿಶೀಲನೆಯನ್ನೂ ನಡೆಸಿದ್ದ.
ಬಾಡಿಗಾರ್ಡ್, ಚಾಲಕನೂ ಬಂಧನ: ಪೊಲೀಸರ ತನಿಖೆ ಚುರುಕು
ಕಾರ್ಯಕ್ರಮ ನಡೆಯುತ್ತಿದ್ದ ಜಾಗದ ಹತ್ತಿರದ ಶಾಪಿಂಗ್ ಮಾಲ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ರೋಹನ್ ಪಾರಿಖ್ ಹಾಗೂ ಆತನ ಗನ್ಮ್ಯಾನ್ ದಿಲೀಪ್ ಕುಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಗನ್ಮ್ಯಾನ್ ಬಳಿ ಬಂದೂಕು ಇರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೋಹನ್, ಆತನ ಬಾಡಿಗಾರ್ಡ್ ಮತ್ತು ಚಾಲಕನನ್ನು ಬಂಧಿಸಿದ್ದು, ಆತನ ಕಚೇರಿ ಸಹಾಯಕ ಪ್ರಥಮೇಶ್ ಬಾಗುಲ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿ, ವಂಚನೆ ಮತ್ತು ವಿವಿಐಪಿ ಭದ್ರತಾ ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಾಗೇಶ್ವರ ಬಾಬಾ ಆಹಾರ ವಿವಾದ : ಕಾಳಿಘಾಟ್ ದೇಗುಲದಲ್ಲಿ ಮೀನಿನ ಪ್ರಸಾದ ಸ್ವೀಕರಿಸಿದ ಸಿಎಂ ಸುವೇಂದು ಅಧಿಕಾರಿ!



















