ಬೆಂಗಳೂರು : ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ ಎಡಗೈ ಮಣಿಕಟ್ಟು ಸ್ಪಿನ್ನರ್ ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸುವಂತೆ ಆಯ್ಕೆದಾರರಿಗೆ ಮತ್ತೊಮ್ಮೆ ಬಲವಾದ ಸಂದೇಶ ರವಾನಿಸಿದ್ದಾರೆ. ಯಾರ್ಕ್‌ಶೈರ್ ಪರ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಸಾಧನೆ ದಾಖಲಿಸಿದ್ದಾರೆ. ಅವರ ಅಮೋಘ ಬೌಲಿಂಗ್ ನೆರವಿನಿಂದ ಯಾರ್ಕ್‌ಶೈರ್ ಇನ್ನಿಂಗ್ಸ್ ಮತ್ತು 106 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯಾರ್ಕ್‌ಶೈರ್ 390 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಂತರ ಬೌಲಿಂಗ್ ಮಾಡಿದ ಕುಲದೀಪ್ ಎಸೆಕ್ಸ್ ಬ್ಯಾಟರ್‌ಗಳಿಗೆ ಸತತವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 70 ರನ್ ನೀಡಿ 4 ವಿಕೆಟ್ ಪಡೆದ ಅವರು, ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನಷ್ಟು ಅಪಾಯಕಾರಿ ಬೌಲಿಂಗ್ ನಡೆಸಿದರು. ಕೇವಲ 50 ರನ್ ನೀಡಿ 6 ವಿಕೆಟ್ ಉರುಳಿಸುವ ಮೂಲಕ ಎಸೆಕ್ಸ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್ ಪಡೆದ ಕುಲದೀಪ್ 10/120ರ ಅದ್ಭುತ ಪಂದ್ಯ ಅಂಕಿ ದಾಖಲಿಸಿದರು. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಮೊದಲ 10 ವಿಕೆಟ್ ಸಾಧನೆಯಾಗಿದೆ. ಬ್ಯಾಟಿಂಗ್‌ನಲ್ಲೂ 36 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಟೆಸ್ಟ್ ತಂಡದ ಬಾಗಿಲು ಮತ್ತೆ ತೆರೆಯುತ್ತಾ?
ಕುಲದೀಪ್ ಅವರ ಈ ಪ್ರದರ್ಶನದ ಮಹತ್ವ ಕೇವಲ ಕೌಂಟಿ ಕ್ರಿಕೆಟ್ ಗೆಲುವಿಗೆ ಸೀಮಿತವಾಗಿಲ್ಲ. ಭಾರತ ಟೆಸ್ಟ್ ತಂಡದಲ್ಲಿ ಅವರಿಗೆ ಸತತ ಅವಕಾಶ ಸಿಗದಿರುವ ಹಿನ್ನೆಲೆಯಲ್ಲಿ ಈ 10 ವಿಕೆಟ್‌ಗಳ ಸಾಧನೆ ಮಹತ್ವ ಪಡೆದಿದೆ. 2017ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಅವರು ಇದುವರೆಗೆ ಕೇವಲ 19 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಆರ್. ಅಶ್ವಿನ್ ನಿವೃತ್ತರಾಗಿರುವುದು ಮತ್ತು ರವೀಂದ್ರ ಜಡೇಜಾ 37ರ ವಯಸ್ಸಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸ್ಪಿನ್ ವಿಭಾಗದಲ್ಲಿ ಹೊಸ ಸಮೀಕರಣ ರೂಪುಗೊಳ್ಳುತ್ತಿದೆ.
ವಾಷಿಂಗ್ಟನ್ ಸುಂದರ್, ಮಾನವ್ ಸುಥಾರ್ ನಡುವೆ ಸ್ಪರ್ಧೆ
ಆದರೆ ಕುಲದೀಪ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ ಖಚಿತ ಎನ್ನುವುದು ಸುಲಭವಲ್ಲ. ವಾಷಿಂಗ್ಟನ್ ಸುಂದರ್ ತಮ್ಮ ಆಫ್ ಸ್ಪಿನ್ ಜತೆಗೆ ಬ್ಯಾಟಿಂಗ್ ಸಾಮರ್ಥ್ಯದಿಂದ ತಂಡದ ಸಮತೋಲನಕ್ಕೆ ಹೆಚ್ಚಿನ ನೆರವು ನೀಡುತ್ತಿದ್ದಾರೆ. ಮತ್ತೊಂದೆಡೆ ಮಾನವ್ ಸುಥಾರ್ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಪಡೆದಿದ್ದ ಸುಥಾರ್, ನಂತರ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
ಹೀಗಾಗಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆದಾರರ ಮುಂದೆ ಸ್ಪಿನ್ ವಿಭಾಗದಲ್ಲಿ ಹಲವು ಆಯ್ಕೆಗಳಿವೆ. ಆದರೆ ಕುಲದೀಪ್ ಅವರ ವಿಶೇಷತೆ ಮಣಿಕಟ್ಟು ಸ್ಪಿನ್. ವಿಭಿನ್ನ ಕೋನ, ತಿರುವು ಮತ್ತು ಬ್ಯಾಟರ್‌ಗಳನ್ನು ಗೊಂದಲಕ್ಕೀಡು ಮಾಡುವ ಸಾಮರ್ಥ್ಯ ಹೊಂದಿರುವ ಅವರು, ಈ 10 ವಿಕೆಟ್‌ಗಳ ಪ್ರದರ್ಶನದ ಮೂಲಕ ತಮ್ಮನ್ನು ಕಡೆಗಣಿಸುವುದು ಸುಲಭವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ : ‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!


















