ಕೋಲ್ಕತ್ತಾ : ಸಾಮಾನ್ಯವಾಗಿ ದೇಶದ ವಿವಿಧ ಭಾಗಗಳಲ್ಲಿ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಮಾಂಸಾಹಾರ ಸೇವನೆಯನ್ನು ಧರ್ಮಕ್ಕೆ ವಿರುದ್ಧ ಎಂಬಂತೆ ನೋಡಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಧಾರ್ಮಿಕ ಆಚರಣೆಗಳಲ್ಲಿಯೂ ಮೀನು ಮತ್ತು ಮಾಂಸವನ್ನು ದೇವರಿಗೆ ನೈವೇದ್ಯವಾಗಿ ನೀಡುವ ಆಚಾರ ನಡೆದುಕೊಂಡು ಬಂದಿದೆ. ಇತ್ತೀಚೆಗೆ ಆಹಾರ ಪದ್ಧತಿ ಕುರಿತು ಬಾಬಾ ಬಾಗೇಶ್ವರ ಅವರ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ ದೇವಸ್ಥಾನದಲ್ಲಿ ಮೀನಿನ ಭೋಗ್ ಸ್ವೀಕರಿಸುವ ಮೂಲಕ ಉತ್ತರ ನೀಡಿದ್ದಾರೆ.
ದುರ್ಗಾ ಪೂಜೆಯಲ್ಲಿ ಮಾಂಸಾಹಾರ ನಿಷೇಧಕ್ಕೆ ಬಾಬಾ ಕರೆ
ಖ್ಯಾತ ಧಾರ್ಮಿಕ ಪ್ರಚಾರಕ ಹಾಗೂ ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ (ಬಾಗೇಶ್ವರ ಬಾಬಾ) ಅವರು, ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರ ತೊರೆಯಬೇಕು ಹಾಗೂ ಮಾಂಸ-ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದರು. ಅಷ್ಟೇ ಅಲ್ಲದೆ, ಈ ಸಮಯದಲ್ಲಿ ಮಾಂಸಾಹಾರ ಸೇವಿಸುವವರನ್ನು ‘ಪಾಖಂಡಿಗಳು’ (ಪಾಪಿಗಳು) ಎಂದು ಟೀಕಿಸಿದ್ದರು. ಅವರ ಈ ಹೇಳಿಕೆಯು ಸಾಂಪ್ರದಾಯಿಕವಾಗಿ ಪೂಜೆಯ ಸಮಯದಲ್ಲಿಯೂ ಮಾಂಸಾಹಾರ ಮತ್ತು ಮೀನಿನ ಖಾದ್ಯಗಳನ್ನು ನೈವೇದ್ಯವಾಗಿ ನೀಡುವ ಬಂಗಾಳಿ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಕಾಳಿಘಾಟ್ ದೇವಸ್ಥಾನದಲ್ಲಿ ಭೋಗ್ ಸ್ವೀಕರಿಸಿದ ಸುವೇಂದು
ಈ ವಿವಾದದ ಬೆನ್ನಲ್ಲೇ ಸುವೇಂದು ಅಧಿಕಾರಿ ಅವರು ಕೌಶಿಕಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ಕಲ್ಕತ್ತಾದ ಶತಮಾನಗಳಷ್ಟು ಹಳೆಯದಾದ ಪ್ರಸಿದ್ಧ ಕಾಳಿಘಾಟ್ ಶ್ರೀ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ನೆರೆದಿದ್ದ ಭಕ್ತರೊಂದಿಗೆ ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾಗಿದ್ದ ಮೀನಿನ ತಲೆಯ ಸಾರು, ಕರಿದ ಮೀನು ಮತ್ತು ಬಾಸಂತಿ ಪುಲಾವ್ ಒಳಗೊಂಡ ಮಹಾಪ್ರಸಾದವನ್ನು ಸ್ವೀಕರಿಸಿದರು. ಶಕ್ತ ಸಂಪ್ರದಾಯದ ಪ್ರಕಾರ ಕಾಳಿಘಾಟ್‌ನಲ್ಲಿ ಶ್ರೀ ಕಾಳಿ ದೇವಿಗೆ ಮೀನು ಹಾಗೂ ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ನೀಡುವುದು ಪುರಾತನ ಆಚಾರವಾಗಿದೆ.
ಆಹಾರ ಪದ್ಧತಿ ಮತ್ತು ಧಾರ್ಮಿಕ ಸಮತೋಲನದ ನಡೆ
ಬಾಗೇಶ್ವರ ಬಾಬಾ ಅವರ ಹೇಳಿಕೆಯನ್ನು ವೈಯಕ್ತಿಕ ಅಭಿಪ್ರಾಯ ಎಂದಿರುವ ಸಿಎಂ ಸುವೇಂದು ಅಧಿಕಾರಿ, ತಮ್ಮ ಸಾಂಪ್ರದಾಯಿಕ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ನಾನು ಸನಾತನಿ ಹಿಂದೂ. ಮಹಾಷ್ಟಮಿ ಮತ್ತು ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರವನ್ನು ಸೇವಿಸುತ್ತೇನೆ. ಆದರೆ ಶ್ರೀ ಕಾಳಿ ಮಾತೆಗೆ ಅರ್ಪಿಸುವ ಮೇಕೆ ಮಾಂಸ ಮತ್ತು ಮೀನಿನ ಪ್ರಸಾದವನ್ನು ಪವಿತ್ರವಾಗಿ ಸ್ವೀಕರಿಸುತ್ತೇನೆ,” ಎಂದು ಹೇಳಿದ್ದಾರೆ. ಬಂಗಾಳದ ಬಿಜೆಪಿಯು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಬಾಗೇಶ್ವರ ಬಾಬಾ ಅವರಿಗೆ ಬಂಗಾಳದ ಆಹಾರ ಪದ್ಧತಿಯನ್ನು ನಿರ್ಧರಿಸುವ ಹಕ್ಕಿಲ್ಲ. ಸ್ವಾಮಿ ವಿವೇಕಾನಂದರು ಸಹ ಬಂಗಾಳಿಗಳ ಆಹಾರ ಪದ್ಧತಿಯನ್ನು ಬೆಂಬಲಿಸಿದ್ದರು,” ಎಂದು ತಿಳಿಸಿ ರಾಜ್ಯದ ಸಂಸ್ಕೃತಿಯ ಪರವಾಗಿ ನಿಂತಿದೆ.
ಇದನ್ನೂ ಓದಿ : ‘ಚರ್ಚೆ ಯಾಕೆ?’ 2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರೋದು ಖಚಿತ ಎಂದ ಬಾಲ್ಯದ ಕೋಚ್!



















