ತಿರುವನಂತಪುರಂ : ವಿಮಾನದಲ್ಲಿ ಪ್ರಯಾಣಿಸುವಾಗ ಸಿಗುವಂಥ ಸತ್ಕಾರ, ಐಷಾರಾಮಿ ಸೌಕರ್ಯಗಳು ಸಾಮಾನ್ಯ ರಸ್ತೆ ಪ್ರಯಾಣದಲ್ಲೂ ಸಿಕ್ಕರೆ ಹೇಗಿರುತ್ತದೆ? ಇಂತಹದೊಂದು ವಿಶಿಷ್ಟ ಅನುಭವವನ್ನು ನೀಡಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಜ್ಜೆ ಇಟ್ಟಿದೆ. ವಿಮಾನದ ಮಾದರಿಯಲ್ಲಿಯೇ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ನೂತನ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಆರಂಭಿಸಿದ್ದು, ಇದರ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ವ್ಲಾಗರ್ ಅಜಯ್ ಜೋನಿ ಎಂಬವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಸ್ನ ವೈಭವದ ನೋಟ ಅನಾವರಣಗೊಂಡಿದೆ. ತಿರುವನಂತಪುರಂ ಮತ್ತು ಕೊಚ್ಚಿ ನಡುವಿನ ಸುಮಾರು 200 ರಿಂದ 227 ಕಿಲೋಮೀಟರ್ ದೂರದ ಮಾರ್ಗದಲ್ಲಿ ಈ ಪ್ರೀಮಿಯಂ ಬಸ್ ಸಂಚರಿಸುತ್ತಿದೆ. “ಬಿಸಿನೆಸ್ ಕ್ಲಾಸ್ ಸೌಲಭ್ಯಗಳು ಈಗ ಕೇವಲ ಅಂತಾರಾಷ್ಟ್ರೀಯ ವಿಮಾನಗಳಿಗೆ ಮಾತ್ರ ಸೀಮಿತವಾಗಿಲ್ಲ, ಕೇರಳ ಕೆಎಸ್ಆರ್ಟಿಸಿ ಬಸ್ಗಳಲ್ಲೂ ಲಭ್ಯವಿದೆ” ಎಂದು ವ್ಲಾಗರ್ ಈ ವಿಡಿಯೋದಲ್ಲಿ ಶ್ಲಾಘಿಸಿದ್ದಾರೆ.
ಶವರ್ಮಾ, ಇನ್-ಬಿಲ್ಟ್ ಸ್ಕ್ರೀನ್, ವಿಶೇಷ ಉಪಚಾರ
ಈ ಬಸ್ನಲ್ಲಿ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಮೃದುವಾದ ಲೆದರ್ ಸೀಟುಗಳನ್ನು ಅಳವಡಿಸಲಾಗಿದೆ. ಪ್ರತಿ ಸೀಟಿನ ಮುಂದೆ ವೈಯಕ್ತಿಕ ಮನರಂಜನೆಗಾಗಿ ಇನ್-ಬಿಲ್ಟ್ ಸ್ಕ್ರೀನ್ಗಳು, ಉಚಿತ ವೈಫೈ ಮತ್ತು ಮೊಬೈಲ್ ಚಾರ್ಜಿಂಗ್ ಪೋರ್ಟ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ, ವಿಮಾನದಲ್ಲಿರುವಂತೆ ಪ್ರಯಾಣಿಕರ ಸೇವೆಗಾಗಿ ಏರ್ಹೋಸ್ಟೆಸ್ ಮಾದರಿಯಲ್ಲಿ ಬಸ್ ಹೋಸ್ಟೆಸ್ ಉಪಸ್ಥಿತರಿರಲಿದ್ದಾರೆ. ಪ್ರಯಾಣದ ಮಧ್ಯೆ ಬಿಸಿಯಾದ ಪಾನೀಯಗಳು ಹಾಗೂ ‘ಶವರ್ಮಾ ರೋಲ್’ ನಂತಹ ಉಪಹಾರಗಳನ್ನು ಬಸ್ನಲ್ಲೇ ಉಣಬಡಿಸಲಾಗುತ್ತಿರುವುದು ಪ್ರಯಾಣಿಕರ ಗಮನ ಸೆಳೆದಿದೆ.
ಸ್ವಚ್ಛ ವಾಶ್ರೂಮ್
ಈ ಬಸ್ನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಅದರೊಳಗಿರುವ ನೈರ್ಮಲ್ಯಯುತ ಸ್ವಚ್ಛ ಬಾತ್ರೂಮ್. ಸುಸಜ್ಜಿತ ಮತ್ತು ಶುಚಿಯಾದ ವಾಶ್ರೂಮ್(ಶೌಚಾಲಯ) ವ್ಯವಸ್ಥೆಯು ದೂರದೂರಿನ ಪ್ರಯಾಣಿಕರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದೆ. ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಎಕ್ಸ್ (ಟ್ವಿಟರ್) ತಾಣದಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಕೆಎಸ್ಆರ್ಟಿಸಿಯ ಈ ನೂತನ ಪ್ರಯತ್ನವನ್ನು ಕೊಂಡಾಡಿದ್ದಾರೆ. ಒಟ್ಟಿನಲ್ಲಿ, ಸರ್ಕಾರಿ ಸಾರಿಗೆಯ ಸಾಂಪ್ರದಾಯಿಕ ಚಿತ್ರಣವನ್ನು ಬದಲಾಯಿಸಿ ಹೈಟೆಕ್ ಸ್ಪರ್ಶ ನೀಡಿರುವ ಕೇರಳ ಸರ್ಕಾರದ ಈ ಹೊಸ ಬಸ್ ಪ್ರಯಾಣಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ಹಿಂದೂ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ತಾರತಮ್ಯ ಆರೋಪ : ಪ್ಯಾರಿಸ್ನ ಐಫೆಲ್ ಟವರ್ ಬಂದ್


















