ಬೆಂಗಳೂರು : ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವವರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರವು ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ 30ರ ಗಡುವು ನೀಡಿದೆ. ಹಾಗಾಗಿ, ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಸೂಚನೆ ನೀಡಿದೆ.
ಆನ್ ಲೈನ್ ಮೂಲಕ ಹೇಗೆ?
ಆನ್ ಲೈನ್ ಮೂಲಕ ಸುಲಭವಾಗಿ ಇ-ಕೆವೈಸಿ ಮಾಡಿಸಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ Mera Ration ಅಪ್ಲಿಕೇಶನ್ ಹಾಗೂ Aadhaar FaceRD ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ನಲ್ಲಿ ‘Aadhaar Seeding’ ಅಥವಾ ಇ-ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ವಿವರಗಳನ್ನು ನಮೂದಿಸಬೇಕು. ಒಟಿಪಿ ಅಥವಾ ಫೇಸ್ ಅಥೆಂಟಿಕೇಶನ್ ಅಥವಾ ಮುಖಚಹರೆಯ ಗುರುತು ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಆಫ್ ಲೈನ್ ಮೂಲಕ ಹೇಗೆ?
ಆನ್ ಲೈನ್ ಮೂಲಕ ಇ-ಕೆವೈಸಿ ಮಾಡಿಸಲು ಆಗದವರು ಆಫ್ ಲೈನ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಕುಟುಂಬದ ಸರ್ವ ಸದಸ್ಯರು ಭೇಟಿ ನೀಡಬೇಕು. ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಖ್ಯೆಯನ್ನು ನೀಡಬೇಕು. ಅಲ್ಲಿನ ವಿತರಕರು ನಿಮ್ಮ ಬಯೋಮೆಟ್ರಿಕ್ ಪಡೆದು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಡುತ್ತಾರೆ. ನೆನಪಿರಲಿ, ಇ-ಕೆವೈಸಿ ಪೂರ್ಣಗೊಳಿಸುವುದು ಸಂಪೂರ್ಣ ಉಚಿತವಾಗಿದೆ. ನೀವು ಯಾರಿಗೂ ದುಡ್ಡು ಕೊಡಬೇಕಿಲ್ಲ.
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದರಿಂದ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲು ಮತ್ತು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗಿರುವ ವ್ಯಕ್ತಿಗಳ ಹೆಸರಿನಲ್ಲಿರುವ ಪಡಿತರ ಚೀಟಿಯನ್ನು ರದ್ದುಗೊಳಿಸಲು ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಅರ್ಹರಿಗೆ ಮಾತ್ರ ಪಡಿತರ ಲಭಿಸಬೇಕು ಎಂಬುದು ಸರ್ಕಾರದ ಉದ್ದೇಶವೂ ಆಗಿದೆ.
ಇದನ್ನೂ ಓದಿ : ಇಂಗ್ಲೆಂಡ್ ಲಯನ್ಸ್ ಕೋಚ್ ಆಗಿ ಜೊನಾಥನ್ ಟ್ರಾಟ್‌ಗೆ ಹೊಸ ಜವಾಬ್ದಾರಿ ; ಫ್ಲಿಂಟಾಫ್ ಬಳಿಕ ಮಹತ್ವದ ಅವಕಾಶ


















