ಚೆನ್ನೈ : ಮಹಿಳೆಯರ ಕುರಿತು ಅತ್ಯಂತ ಕೀಳುಮಟ್ಟದ ಹಾಗೂ ದ್ವಂದ್ವಾರ್ಥದ ಮಾತುಗಳನ್ನು ಆಡುವವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ, ವಿರೋಧ ಪಕ್ಷದ ನಾಯಕ ಡಿಎಂಕೆಯ ಉದಯನಿಧಿ ಸ್ಟಾಲಿನ್ ಅವರ ಹೆಸರು ಪ್ರಸ್ತಾಪಿಸದೇ, ಸಾರ್ವಜನಿಕವಾಗಿ ಮಹಿಳೆಯರನ್ನು ನಿಂದಿಸುವ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡುವ ರಾಜಕಾರಣಿಗಳ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.
ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರಿಗೆ ಅಪಮಾನ ಸಹಿಸಲ್ಲ
ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ವಾಕ್ ಸ್ವಾತಂತ್ರ್ಯವನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾರ್ವಜನಿಕ ವೇದಿಕೆಗಳಲ್ಲಿ ದ್ವಂದ್ವಾರ್ಥದಲ್ಲಿ ಮಾತನಾಡುವುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ತಾಯಿ, ತಂಗಿಯರಿದ್ದಾರೆ. ಹೀಗಿರುವಾಗ ಮಹಿಳೆಯರನ್ನು ಕೀಳಾಗಿ ಕಾಣುವುದು ಅಥವಾ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಅಪಮಾನವಾದರೆ ಕಾನೂನು ಖಂಡಿತ ತನ್ನ ಕೆಲಸ ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು.
ವಿವಾದಕ್ಕೆ ಕಾರಣವಾಗಿದ್ದ ಉದಯನಿಧಿ ಸ್ಟಾಲಿನ್ ಹೇಳಿಕೆ
ಆಗಸ್ಟ್ 3ರಂದು ತಂಜಾವೂರಿನಲ್ಲಿ ನಡೆದ ಕಾವೇರಿ ವಿವಾದ ಕುರಿತ ಪ್ರತಿಭಟನೆಯ ವೇಳೆ, ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದಾಗ ಅವರ ಬೆಂಬಲಿಗರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದರು. ಈ ವೇಳೆ ಉದಯನಿಧಿ ಅವರು ನೀಡಿದ ಕೆಲವು ಹೇಳಿಕೆಗಳು ಹಾಗೂ ವ್ಯಂಗ್ಯದ ನಗು ನಟಿ ತ್ರಿಷಾ ಅವರ ಕುರಿತಾದ ದ್ವಂದ್ವಾರ್ಥದ ಕಾಮೆಂಟ್ ಎಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಆಗಸ್ಟ್ 4 ರಂದು ಉದಯನಿಧಿ ಅವರನ್ನು ಪೊಲೀಸರು ಬಂಧಿಸಿ, ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಆದರೆ ತಾವು ಯಾವುದೇ ಕೀಳು ಉದ್ದೇಶದಿಂದ ಮಾತನಾಡಲಿಲ್ಲ ಎಂದು ಉದಯನಿಧಿ ಸ್ಪಷ್ಟನೆ ನೀಡಿದ್ದರು.
ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆಗೆ ಆದ್ಯತೆ
ಇದೇ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು ಮಾತನಾಡಿದ ಸಿಎಂ ವಿಜಯ್, “ಪೊಲೀಸ್ ಪಡೆ ಎಂದರೆ ಕೇವಲ ಆರೋಪಿಗಳನ್ನು ಬಂಧಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಅಭಿವೃದ್ಧಿಗೆ ಕಾನೂನು ಸುವ್ಯವಸ್ಥೆಯೇ ಅಡಿಪಾಯ. ಕಾನೂನು ಪಾಲಿಸುವವರಿಗೆ ಪೊಲೀಸ್ ಸ್ನೇಹಿತ, ಉಲ್ಲಂಘಿಸುವವರಿಗೆ ಶತ್ರು” ಎಂದರು. ಅಲ್ಲದೆ, ಪೊಲೀಸ್ ತನಿಖೆಗಳಲ್ಲಿ ಮುಖ್ಯಮಂತ್ರಿ, ಸಚಿವರು ಅಥವಾ ಅಧಿಕಾರಿಗಳು ಯಾರೂ ಪ್ರಭಾವ ಬೀರಬಾರದು ಎಂದು ಸೂಚನೆ ನೀಡಿದರು.
ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದ ಸಿಎಂ, ಭ್ರಷ್ಟಾಚಾರದ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸಲಾಗುವುದು ಎಂದು ಪುನರುಚ್ಚರಿಸಿದರು. ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾದರೆ ಅವರ ಕುಟುಂಬದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು. ಲಾಕಪ್ ಡೆತ್ ಅಥವಾ ಕಸ್ಟಡಿ ಹಿಂಸೆಯನ್ನು ಸಾಮಾನ್ಯ ಸಂಗತಿ ಎಂದು ಪರಿಗಣಿಸದೆ, ನ್ಯಾಯಾಂಗ ತನಿಖೆಗೆ ಒಳಪಡಿಸಲಾಗುವುದು ಎಂದೂ ಅವರು ಎಚ್ಚರಿಸಿದರು.
ಇದನ್ನೂ ಓದಿ : ಸಾರ್ವಜನಿಕರೇ ಎಚ್ಚರ ; ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ ಎಂದು ಮೋಸ.. ಮೊದಲು ಇವುಗಳ ಬಗ್ಗೆ ತಿಳಿಯಿರಿ


















