ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ದೇಶದಲ್ಲೇ ಬೃಹತ್ ವಿಮಾ ಸಂಸ್ಥೆಯಾಗಿದೆ. ಇದು ಕೇಂದ್ರ ಸರ್ಕಾರದ ಸಂಸ್ಥೆಯಾಗಿರುವ ಕಾರಣ ಕೋಟ್ಯಂತರ ಜನ ವಿಶ್ವಾಸ ಹೊಂದಿದ್ದಾರೆ. ಇಂತಹ ಸಂಸ್ಥೆಯು ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಮತ್ತು ನಿಯಮಿತ ಆದಾಯವನ್ನು ಹೊಸ ಯೋಜನೆಯನ್ನು ಪರಿಚಯಿಸಿದೆ. ‘ಎಲ್ಐಸಿ ಸ್ಮಾರ್ಟ್ ಪೆನ್ಶನ್ ಪ್ಲ್ಯಾನ್’ (LIC Smart Pension Plan) ಹೆಸರಿನ ಈ ಯೋಜನೆಯು ಹೂಡಿಕೆದಾರರಿಗೆ ಜೀವನಪೂರ್ತಿ ಖಚಿತವಾದ ಪಿಂಚಣಿ ಪಡೆಯಲು ಉತ್ತಮ ಅವಕಾಶ ಕಲ್ಪಿಸುತ್ತದೆ.
ಈ ಯೋಜನೆಯು ಸಿಂಗಲ್ ಪ್ರೀಮಿಯಂ (ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸುವುದು) ಹೂಡಿಕೆ ಮಾಡಿದ ತಕ್ಷಣವೇ ಪಿಂಚಣಿ ಸೌಲಭ್ಯವನ್ನು ಆರಂಭಿಸುತ್ತದೆ. ಷೇರು ಮಾರುಕಟ್ಟೆಯ ಯಾವುದೇ ಏರಿಳಿತಗಳ ಅಪಾಯವಿಲ್ಲದೆ ಸಂಪೂರ್ಣ ಸುರಕ್ಷಿತ ಹಾಗೂ ಗ್ಯಾರಂಟಿ ಆದಾಯವನ್ನು ಬಯಸುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಇದೊಂದು ನಾನ್-ಲಿಂಕ್ಡ್ ಮತ್ತು ನಾನ್-ಪಾರ್ಟಿಸಿಪೇಟಿಂಗ್ ಯೋಜನೆಯಾಗಿದ್ದು, ಪಾಲಿಸಿ ಪಡೆಯುವಾಗಲೇ ಪಿಂಚಣಿಯ ಮೊತ್ತವು ನಿಗದಿಯಾಗುತ್ತದೆ.
ಲೆಕ್ಕಾಚಾರದ ಪ್ರಕಾರ, ಒಬ್ಬ ವ್ಯಕ್ತಿಯು ತಿಂಗಳಿಗೆ ಸುಮಾರು 20 ಸಾವಿರ ರೂ. ಪಿಂಚಣಿ ಪಡೆಯಲು ಬಯಸಿದರೆ, ಅವರು ಒಟ್ಟಾರೆಯಾಗಿ ಅಂದಾಜು 35 ಲಕ್ಷ ರೂ. ಏಕಕಾಲದ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆಯ ಮೊತ್ತಕ್ಕೆ ತಕ್ಕಂತೆ ಪಿಂಚಣಿಯ ಪ್ರಮಾಣವು ಹೆಚ್ಚಾಗುತ್ತದೆ. ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರಿಗೆ ಈ ಯೋಜನೆ ಉತ್ತಮ ಯೋಜನೆಯಾಗಿದೆ.
ಯಾವುದೇ ಉದ್ಯೋಗಿಗಳು ನಿವೃತ್ತರಾದ ಬಳಿಕ ಪಿಎಫ್, ಗ್ರಾಚ್ಯುಟಿ ಸೇರಿ ಲಕ್ಷಾಂತರ ರೂ. ಲಭಿಸಿರುತ್ತದೆ. ಅಂತಹ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಎಲ್ಐಸಿಯ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದರಿಂದಾಗಿ, ನಿವೃತ್ತಿ ಜೀವನವನ್ನು ಸ್ವಾವಲಂಬಿಯಾಗಿ ಕಳೆಯಲು ಸಾಧ್ಯವಾಗುತ್ತದೆ.
ಗಮನಿಸಿ: ಎಲ್ಐಸಿ ಯೋಜನೆಯ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಹೂಡಿಕೆ ಮಾಡಲು ನಾವು ಶಿಫಾರಸು ಮಾಡುತ್ತಿಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.


















