ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಡುತೊರಹಳ್ಳ ಡ್ಯಾಂ ಹಿನ್ನೀರಿನಲ್ಲಿ ಕಡವೆಯನ್ನು ಅಕ್ರಮವಾಗಿ ಬೇಟೆಯಾಡಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿರುವ ಅವರು, ಪ್ರಕರಣವನ್ನು ಕರ್ನಾಟಕ ರಾಜ್ಯ ಅಪರಾಧ ತನಿಖಾ ಇಲಾಖೆ (CID)ಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೆ.1ರಂದು ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ನಾಲ್ವರು ವ್ಯಕ್ತಿಗಳು ನಾಡ ಬಂದೂಕುಗಳನ್ನು ಹಿಡಿದು ಚೀಲಗಳೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಅರಣ್ಯ ಸಿಬ್ಬಂದಿಯನ್ನು ಕಂಡ ತಕ್ಷಣ ಆರೋಪಿಗಳು ಚೀಲಗಳನ್ನು ಬಿಸಾಡಿ ಪರಾರಿಯಾಗಿದ್ದರು. ಬಳಿಕ ಚೀಲಗಳನ್ನು ಅರಣ್ಯ ಸಿಬ್ಬಂದಿ ಪರಿಶೀಲಿಸಿದಾಗ, ಕಡವೆಯನ್ನು ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದು, ಅದರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಸಂಗತಿ ಪತ್ತೆಯಾಗಿದೆ ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.
ಇದು ಸಾಮಾನ್ಯ ವನ್ಯಜೀವಿ ಬೇಟೆ ಪ್ರಕರಣವಲ್ಲ ಎಂದು ದಿನೇಶ್ ಕಲ್ಲಹಳ್ಳಿ ಆತಂಕ ವ್ಯಕ್ತಪಡಿಸಿದ್ದು, ನಾಲ್ವರು ವ್ಯಕ್ತಿಗಳು ರಾತ್ರಿ ವೇಳೆ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯ ಪ್ರದೇಶ ಪ್ರವೇಶಿಸಿ, ವನ್ಯಜೀವಿಯನ್ನು ಬೇಟೆಯಾಡಿ, ಸ್ಥಳದಲ್ಲಿಯೇ ದೇಹವನ್ನು ತುಂಡುಗಳಾಗಿ ಕತ್ತರಿಸಿ ಸಾಗಿಸಿರುವುದರಿಂದ ಇದರ ಹಿಂದೆ ಸಂಘಟಿತ ಕಳ್ಳಬೇಟೆ ಜಾಲ ಹಾಗೂ ವನ್ಯಜೀವಿ ಮಾಂಸದ ಅಕ್ರಮ ಸಾಗಣೆ ಮತ್ತು ಮಾರಾಟ ಜಾಲ ಇರುವ ಸಾಧ್ಯತೆಯನ್ನು ಅವರು ಉಲ್ಲೇಖಿಸಿದ್ದಾರೆ. ಆರೋಪಿಗಳಿಗೆ ಸ್ಥಳೀಯವಾಗಿ ನೆರವು ನೀಡುವ ವ್ಯಕ್ತಿಗಳಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಬಳಸಿರುವ ನಾಡ ಬಂದೂಕುಗಳು ಯಾರಿಗೆ ಸೇರಿವೆ, ಅವುಗಳನ್ನು ಯಾರು ತಯಾರಿಸಿದ್ದಾರೆ ಅಥವಾ ಒದಗಿಸಿದ್ದಾರೆ ಹಾಗೂ ಮದ್ದುಗುಂಡುಗಳನ್ನು ಎಲ್ಲಿಂದ ಪಡೆಯಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕು. ಇದೇ ಶಸ್ತ್ರಾಸ್ತ್ರಗಳನ್ನು ಈ ಹಿಂದೆ ನಡೆದ ಇತರ ಕಳ್ಳಬೇಟೆ ಪ್ರಕರಣಗಳಲ್ಲಿ ಬಳಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹನೂರು ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ನಡೆದ ಹಿಂದಿನ ವನ್ಯಜೀವಿ ಬೇಟೆ ಪ್ರಕರಣಗಳೊಂದಿಗೆ ಆರೋಪಿಗಳಿಗೆ ಯಾವುದೇ ಸಂಪರ್ಕವಿದೆಯೇ ಎಂಬ ತನಿಖೆಗೂ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಪ್ರಸ್ತುತ ಹನೂರು ವಲಯದ ಅರಣ್ಯ ಸಿಬ್ಬಂದಿಯೇ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಕರಣದ ಗಂಭೀರತೆಯನ್ನು ಗಮನಿಸಿದರೆ ತನಿಖೆಯನ್ನು ಸ್ಥಳೀಯ ಇಲಾಖೆಯ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ರಾತ್ರಿ ಗಸ್ತು, ಬೀಟ್ ವ್ಯವಸ್ಥೆ, ಗುಪ್ತಚರ ಮಾಹಿತಿ ಹಾಗೂ ಅರಣ್ಯ ಪ್ರದೇಶದ ಮೇಲ್ವಿಚಾರಣೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಡವೆಯ ಮಾಂಸವನ್ನು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು, ಈ ಹಿಂದೆ ಇದೇ ರೀತಿಯ ವನ್ಯಜೀವಿ ಮಾಂಸದ ಅಕ್ರಮ ವ್ಯಾಪಾರ ನಡೆದಿದೆಯೇ ಹಾಗೂ ಇದರ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಪ್ರಕರಣದ ನಿಷ್ಪಕ್ಷಪಾತತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿ, ಸಂಪೂರ್ಣ ಕಳ್ಳಬೇಟೆ ಜಾಲವನ್ನು ಬಯಲಿಗೆಳೆಯುವ ಉದ್ದೇಶದಿಂದ ಈ ಪ್ರಕರಣವನ್ನು CIDಗೆ ವಹಿಸಿ ತನಿಖೆ ನಡೆಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ‘ನಾಟಿ ಬಾಯ್’ ರಾಕೆಟ್ ಹೆಗಲಿಗೆ ಇಸ್ರೋ ಭವಿಷ್ಯ : ಇಂದು ತಡರಾತ್ರಿ ಅರ್ಥ್ ಇಮೇಜಿಂಗ್ ಉಪಗ್ರಹ ಉಡಾವಣೆ


















