ಚೆನ್ನೈ : ದೇವಸ್ಥಾನಗಳ ಪಾವಿತ್ರ್ಯತೆ, ಶಾಂತಿ ಮತ್ತು ಧಾರ್ಮಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದೆ. ರಾಜ್ಯದ 52 ಪ್ರಮುಖ ದೇವಸ್ಥಾನಗಳ ಆವರಣದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ. ಮಂಗಳವಾರದಿಂದಲೇ ಹೊಸ ನಿಯಮ ಜಾರಿಗೆ ಬಂದಿದ್ದು, ಸ್ಮಾರ್ಟ್‌ಫೋನ್ ಹೊಂದಿರುವ ಭಕ್ತರು ದೇವಸ್ಥಾನದ ಪ್ರವೇಶದ್ವಾರದಲ್ಲಿರುವ ನಿಗದಿತ ಕೇಂದ್ರಗಳಲ್ಲಿ ಮೊಬೈಲ್‌ಗಳನ್ನು ಇಟ್ಟು ಹೋಗಬೇಕಾಗುತ್ತದೆ. ಆದರೆ ಕ್ಯಾಮೆರಾ ಇಲ್ಲದ ಸಾಮಾನ್ಯ ಮೊಬೈಲ್‌ಗಳನ್ನು ದೇವಸ್ಥಾನದೊಳಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.
ಸ್ಮಾರ್ಟ್‌ಫೋನ್ ಇಟ್ಟರೆ 5 ರೂ. ಶುಲ್ಕ
ಹೊಸ ವ್ಯವಸ್ಥೆಯ ಪ್ರಕಾರ, ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶದ್ವಾರದಲ್ಲಿರುವ ನಿಗದಿತ ಜಮಾ ಕೇಂದ್ರಗಳಲ್ಲಿ ಒಪ್ಪಿಸಬೇಕು. ಪ್ರತಿ ಮೊಬೈಲ್‌ಗೆ 5 ರೂ. ಶುಲ್ಕ ಪಾವತಿಸಬೇಕು. ಮೊಬೈಲ್ ಒಪ್ಪಿಸಿದ ಬಳಿಕ ಭಕ್ತರಿಗೆ ಸ್ವೀಕೃತಿ ಚೀಟಿ ಅಥವಾ ಟೋಕನ್ ನೀಡಲಾಗುತ್ತದೆ. ಮೊಬೈಲ್ ವಾಪಸ್ ಪಡೆಯುವವರೆಗೆ ಈ ಚೀಟಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ಮೊಬೈಲ್ ಹಿಂಪಡೆಯುವ ಸಂದರ್ಭದಲ್ಲಿ ಚೀಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿ ಸಾಧನವನ್ನು ಹಸ್ತಾಂತರಿಸಲಾಗುತ್ತದೆ. ಸರ್ಕಾರ ಸ್ಪಷ್ಟಪಡಿಸಿರುವಂತೆ, ಈ 5 ರೂಪಾಯಿ ಶುಲ್ಕವನ್ನು ಆದಾಯ ಗಳಿಸುವ ಉದ್ದೇಶದಿಂದ ವಿಧಿಸಲಾಗುತ್ತಿಲ್ಲ. ಬದಲಾಗಿ, ಮೊಬೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅಗತ್ಯವಿರುವ ಸಿಬ್ಬಂದಿ, ಸುರಕ್ಷತಾ ಲಾಕರ್‌ಗಳು ಹಾಗೂ ಇತರ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಫೋಟೊ, ಸೆಲ್ಫಿ ಹಾಗೂ ರೀಲ್ಸ್‌ಗೆ ಕಡಿವಾಣ
ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲು ಪ್ರಮುಖ ಕಾರಣ ಭಕ್ತರು ದೇವರ ದರ್ಶನದ ವೇಳೆ ಫೋಟೊ, ವಿಡಿಯೊ, ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ಕಿರು ವಿಡಿಯೊಗಳನ್ನು (ರೀಲ್ಸ್) ಚಿತ್ರೀಕರಿಸುತ್ತಿರುವುದು. ವಿಶೇಷವಾಗಿ ಯುವಜನರು ದೇವಸ್ಥಾನದ ಆವರಣದಲ್ಲಿಯೇ ಫೋಟೊ ತೆಗೆದುಕೊಳ್ಳುವುದು ಹಾಗೂ ವಿಡಿಯೊ ದಾಖಲಿಸುವುದರಿಂದ ದೇವಸ್ಥಾನದ ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು.
2022ರ ಡಿಸೆಂಬರ್ 2ರಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ನೀಡಿದ್ದ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ದೇವರ ಮೂರ್ತಿಗಳು, ಪೂಜಾ ವಿಧಿವಿಧಾನಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಗಣ್ಯರು, ರಾಜಕೀಯ ನಾಯಕರು ಅಥವಾ ಚಿತ್ರರಂಗದ ಪ್ರಮುಖರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅವರ ಫೋಟೊ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಅನುಮತಿ ನೀಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಕಾಂಚೀಪುರಂ ದೇವಸ್ಥಾನದಲ್ಲಿ ಜಾರಿ ಹಾಗೂ ಭಕ್ತರ ಪ್ರತಿಕ್ರಿಯೆ
ಪ್ರಸಿದ್ಧ ಕಾಂಚೀಪುರಂ ದೇವರಾಜಸ್ವಾಮಿ–ಅತ್ತಿ ವರದರಾಜ ದೇವಸ್ಥಾನದಲ್ಲಿ ಹೊಸ ವ್ಯವಸ್ಥೆ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿದೆ. ಮೊಬೈಲ್‌ಗಳನ್ನು ಸಂಗ್ರಹಿಸಲು ಇಬ್ಬರು ಕಂಪ್ಯೂಟರ್ ನಿರ್ವಾಹಕರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರ ಛಾಯಾಚಿತ್ರ, ಮೊಬೈಲ್‌ನ ಮಾದರಿ ಹಾಗೂ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ದಾಖಲಿಸಲಾಗುತ್ತಿದೆ. ಭಕ್ತರಿಗೆ ನಿಯಮದ ಬಗ್ಗೆ ಮಾಹಿತಿ ನೀಡಲು ದೇವಸ್ಥಾನದ ಆವರಣದಲ್ಲಿ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಸರ್ಕಾರದ ಹೊಸ ನಿರ್ಧಾರಕ್ಕೆ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇವಸ್ಥಾನದ ಪಾವಿತ್ರ್ಯ ಕಾಪಾಡಲು ಇದು ಅಗತ್ಯ ಕ್ರಮ ಎಂದು ಕೆಲವರು ಸ್ವಾಗತಿಸಿದರೆ, ಮೊಬೈಲ್‌ಗಳ ಸುರಕ್ಷತೆಯ ಹೊಣೆಗಾರಿಕೆ ಮತ್ತು ಉದ್ದನೆಯ ಸರತಿ ಸಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಗೂ ಹೆಚ್ಚಿದ ಜವಾಬ್ದಾರಿ
ಹೊಸ ನಿಯಮದಿಂದ ದೇವಸ್ಥಾನದ ಸಿಬ್ಬಂದಿಯ ಮೇಲೂ ಹೆಚ್ಚುವರಿ ಹೊಣೆಗಾರಿಕೆ ಬಿದ್ದಿದೆ. ಚಪ್ಪಲಿ ಸಂಗ್ರಹಿಸುವ ವ್ಯವಸ್ಥೆಗೆ ಹೋಲಿಸಿದರೆ ಮೊಬೈಲ್‌ಗಳ ನಿರ್ವಹಣೆ ಹೆಚ್ಚು ಸೂಕ್ಷ್ಮವಾದದ್ದು ಎಂದು ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವ ಸ್ಥಳೀಯ ಭಕ್ತರಿಗೆ ಪ್ರತಿ ಬಾರಿ 5 ರೂಪಾಯಿ ಪಾವತಿಸಿ ಮೊಬೈಲ್ ಜಮಾ ಮಾಡುವುದು ಆರ್ಥಿಕವಾಗಿ ಮತ್ತು ಸಮಯದ ದೃಷ್ಟಿಯಿಂದ ತೊಂದರೆಯಾಗಬಹುದು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಇದನ್ನೂ ಓದಿ : ವಿದ್ಯಾರ್ಥಿನಿಯರಿಗೆ ಶುಭ ಸಮಾಚಾರ : ಮಹೀಂದ್ರಾ ಕಂಪನಿಯಿಂದ ಸ್ಕಾಲರ್ ಶಿಪ್‌ಗೆ ಅರ್ಜಿ ಆಹ್ವಾನ!



















