ಬೆಂಗಳೂರು : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (IICT) ಮತ್ತು ಒಟಿಟಿ ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ ಸಂಸ್ಥೆಗಳು ಜಂಟಿಯಾಗಿ ಪ್ರಸಕ್ತ ಸಾಲಿನಲ್ಲಿ ಸ್ಕಾಲರ್ ಶಿಪ್ ಘೋಷಣೆ ಮಾಡಿವೆ. ಎನಿಮೇಷನ್ ಸೇರಿ ಹಲವು ಕ್ರಿಯೇಟಿವ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನ ಎಷ್ಟು? ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ವಿದ್ಯಾರ್ಥಿವೇತನ ಎಷ್ಟು?
ಸ್ಕಾಲರ್ ಶಿಪ್ ಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೋರ್ಸ್ ಶುಲ್ಕದ ಶೇ.50 ರಿಂದ 80ರವರೆಗೆ ಆರ್ಥಿಕ ನೆರವು ಸಿಗಲಿದೆ. ಒಟ್ಟು 100 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಲಭ್ಯವಿದೆ. ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಮುಗಿಸಿರಬೇಕು. ಆಯಾ ಕೋರ್ಸ್ ಗೆ ತಕ್ಕ ಕೌಶಲ್ ಹೊಂದಿರಬೇಕು. ವಿದ್ಯಾರ್ಥಿಗಳು ಹಾಗೂ ತಮ್ಮ ಕೌಶಲ ಹೆಚ್ಚಿಸಿಕೊಳ್ಳಲು ಬಯಸುವ ವೃತ್ತಿಪರರು ಕೂಡ ಅರ್ಜಿ ಸಲ್ಲಿಸಬಹುದು.
ಆಗಸ್ಟ್ 24ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಸೆಪ್ಟೆಂಬರ್ 30ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ದೇಶದ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಬಹುದು. ಜಾತಿ, ಧರ್ಮದ ಭೇದವಿಲ್ಲದೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಆನ್ ಲೈನ್ ಮೂಲಕ ಟೆಸ್ಟ್ ನಡೆಸಲಾಗುತ್ತದೆ. ವೈಯಕ್ತಿಕ ಸಂದರ್ಶನ ನಡೆಸಿ ಸ್ಕಾಲರ್ ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ.
ಯಾವ ಕೋರ್ಸ್‌ಗಳಿಗೆ ಅನ್ವಯ?
ಐಐಸಿಟಿಯಲ್ಲಿರುವ ವಿವಿಧ ಎನಿಮೇಷನ್, ವಿಎಫ್ಎಕ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಸಂಬಂಧಿತ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು netflixscholars.iict.org ಗೆ ಭೇಟಿ ನೀಡಬೇಕು. ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇದನ್ನೂ ಓದಿ : ‘ಧೋನಿ ಜೊತೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ’ : RCB-CSK ಹ್ಯಾಂಡ್‌ಶೇಕ್ ವಿವಾದಕ್ಕೆ ಕರಣ್ ಶರ್ಮಾ ತೆರೆ!


















