ನವದೆಹಲಿ : ದೇಶದ ಜಿಡಿಪಿ ಪ್ರಗತಿ ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ಅಭಿವೃದ್ಧಿ ಸಾಧಿಸಿರುವಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ‘ಸ್ವದೇಶಿ’ ಮತ್ತು ‘ಆತ್ಮನಿರ್ಭರ ಭಾರತ’ ತತ್ವಗಳನ್ನು ಇನ್ನಷ್ಟು ಗಟ್ಟಿಯಾಗಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಜಾಗತಿಕವಾಗಿ ವಿವಿಧ ಸಂಘರ್ಷಗಳು ಮತ್ತು ಆರ್ಥಿಕ ಸವಾಲುಗಳು ಎದುರಾಗಿದ್ದರೂ ಭಾರತವು ಸಾಧಿಸಿರುವ ಈ ಪ್ರಗತಿಯನ್ನು ಶ್ಲಾಘಿಸಿರುವ ಅವರು, ಪ್ರತಿಯೊಬ್ಬ ನಾಗರಿಕನೂ ದೇಶೀಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ, ಜಿಡಿಪಿ ಪ್ರಗತಿ ನಿರೀಕ್ಷೆಗೂ ಮೀರಿದ್ದು ಒಂದು ಅದ್ಭುತ ಸಾಧನೆ ಎಂದಿದ್ದಾರೆ.
ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ಇನ್‌ಸ್ಟಾಗ್ರಾಮ್ ವಿಡಿಯೋ ಸಂದೇಶದ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ಜಗತ್ತು ಯುದ್ಧ, ಪೂರೈಕೆ ಸರಪಳಿ ವ್ಯತ್ಯಯ ಮತ್ತು ಆರ್ಥಿಕ ಅಸ್ಥಿರತೆಯಿಂದ ಕಂಗೆಟ್ಟಿದೆ. ಕೋವಿಡ್ ಕಾಲದಿಂದಲೂ ಜಾಗತಿಕವಾಗಿ ಸ್ಥಿರತೆ ಕೊರತೆಯಿದ್ದರೂ, ಭಾರತದ 140 ಕೋಟಿ ಜನರ ಸಾಮೂಹಿಕ ಶ್ರಮ ಹಾಗೂ ದೃಢ ಸಂಕಲ್ಪದಿಂದಾಗಿ ದೇಶವು ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ್ದಾರೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಾಧಿಸಿದ ಶೇ.7.8 ಪ್ರಗತಿಯು ಪ್ರತಿಯೊಬ್ಬ ಭಾರತೀಯನಲ್ಲೂ ಹೊಸ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ.
‘ವೆಡ್ ಇನ್ ಇಂಡಿಯಾ’ಗೆ ಕರೆ
ದೇಶದ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ಮೋದಿ ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿದ್ದಾರೆ. ಅನಗತ್ಯವಾಗಿ ವಿದೇಶಿ ಪ್ರವಾಸಗಳನ್ನು ಕೈಗೊಳ್ಳಬೇಡಿ, ಬದಲಾಗಿ ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂದು ಕೋರಿದ್ದಾರೆ. ಜೊತೆಗೆ ವಿದೇಶಗಳಲ್ಲಿ ಅದ್ಧೂರಿ ‘ಡೆಸ್ಟಿನೇಷನ್ ವೆಡ್ಡಿಂಗ್’ ಆಯೋಜಿಸುವ ಬದಲು ‘ವೆಡ್ ಇನ್ ಇಂಡಿಯಾ’ (ಭಾರತದಲ್ಲೇ ಮದುವೆಯಾಗಿ) ಮಂತ್ರವನ್ನು ಪಾಲಿಸುವಂತೆ ಉದ್ಯಮಿಗಳು ಹಾಗೂ ಶ್ರೀಮಂತ ವರ್ಗಕ್ಕೆ ಮನವಿ ಮಾಡಿದ್ದಾರೆ. ಅಗತ್ಯವಿಲ್ಲದಿದ್ದಲ್ಲಿ ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಮುನ್ನೆಚ್ಚರಿಕೆಯಾಗಿ ತಡೆಯುವುದು ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ ನೆರವಾಗಲಿದೆ ಎಂದು ಕಿವಿಮಾತು ಹೇಳಿದ್ದಾರೆ.
ವಿಕಸಿತ ಭಾರತ ನಿರ್ಮಾಣಕ್ಕೆ ಸಾರ್ವಜನಿಕ ಭಾಗಿತ್ವ
ನಾವು ಎಷ್ಟು ಹೆಚ್ಚಾಗಿ ಸ್ಥಳೀಯ (ಸ್ವದೇಶಿ) ವಸ್ತುಗಳನ್ನು ಖರೀದಿಸುತ್ತೇವೋ ಮತ್ತು ಬಳಸುತ್ತೇವೋ ಅಷ್ಟೇ ವೇಗವಾಗಿ ದೇಶದ ಆರ್ಥಿಕತೆ ಮುನ್ನಡೆಯುತ್ತದೆ. ಸ್ವಾತಂತ್ರ್ಯದ 100 ವರ್ಷಗಳ ಸಂಭ್ರಮ ಆಚರಿಸುವ ವೇಳೆಗೆ ಯುವಜನತೆಯ ಕೈಗೆ ‘ವಿಕಸಿತ ಭಾರತ’ವನ್ನು ಒಪ್ಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಸರಿಯಾದ ನೀತಿ, ಸ್ಪಷ್ಟ ನಿಯತ್ತು ಮತ್ತು ದೇಶವಾಸಿಗಳ ಒಗ್ಗಟ್ಟಿನ ಶಕ್ತಿ ಇಂದು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದು, ಮುಂದೆಯೂ ಇಂಧನ ಉಳಿತಾಯ, ಸಾರ್ವಜನಿಕ ಸಾರಿಗೆ ಬಳಕೆ ಹಾಗೂ ಸ್ಥಳೀಯ ಉತ್ಪನ್ನಗಳ ಖರೀದಿಯ ಮೂಲಕ ಪ್ರತಿಯೊಬ್ಬರೂ ಈ ಆರ್ಥಿಕ ಕ್ರಾಂತಿಯಲ್ಲಿ ಭಾಗಿಯಾಗಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ.
ಇದನ್ನೂ ಓದಿ ; ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಆರಂಭ : ಮನೆ ಯಜಮಾನಿಯರು ಈ ದಾಖಲೆ ನೀಡಲೇಬೇಕು!



















