ಕೊಚ್ಚಿ : ಮಹಿಳೆಯರು ಎಂದಿಗೂ ಸಾರ್ವಜನಿಕ ರಂಗಕ್ಕೆ ಬರಬಾರದು, ಅವರು ಮನೆಯೊಳಗೆ ಇರುವುದೇ ಅವರಿಗೆ ನೀಡುವ ಗೌರವ ಎಂದು ಕೇರಳದ ಮುಸ್ಲಿಂ ಧರ್ಮಗುರು, ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ (ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್) ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕೊಚ್ಚಿಯಲ್ಲಿ ನಡೆದ ‘ಹುಬ್ಬುಲ್ ರಸೂಲ್’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಚಿನ್ನದ ಆಭರಣಗಳಿಗೆ ಹೋಲಿಸಿ ನೀಡಿರುವ ಹೇಳಿಕೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಸಮ್ಮೇಳನದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಕಾಂತಪುರಂ, ಆಭರಣದ ಶೋರೂಂ ಮತ್ತು ಕಲ್ಲುಗಳ ಅಂಗಡಿಯ ಉದಾಹರಣೆ ನೀಡಿದರು. “ಬೆಲೆಬಾಳುವ ಚಿನ್ನದ ಹಾರವನ್ನು ಕಪಾಟಿನಲ್ಲಿ, ಪೆಟ್ಟಿಗೆಯೊಳಗಿಟ್ಟು ಸುರಕ್ಷಿತವಾಗಿಡಲಾಗುತ್ತದೆ. ಅದೇ ರಸ್ತೆಬದಿಯಲ್ಲಿಡುವ ರುಬ್ಬುವ ಕಲ್ಲುಗಳನ್ನು ಪ್ರತಿಯೊಬ್ಬರೂ ತುಳಿದುಕೊಂಡು ಹೋಗುತ್ತಾರೆ. ಚಿನ್ನದ ಹಾರವನ್ನು ರಸ್ತೆಯಲ್ಲಿಟ್ಟರೆ ಪ್ರತಿಯೊಬ್ಬರೂ ಮುಟ್ಟುವುದರಿಂದ ಅದರ ಸೌಂದರ್ಯ ಮತ್ತು ಮೌಲ್ಯ ನಾಶವಾಗುತ್ತದೆ. ಅಂತೆಯೇ, ಮಹಿಳೆಯರು ತಮ್ಮ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಬೇಕೆಂದರೆ ಪೆಟ್ಟಿಗೆಯಂತಿರುವ ಮನೆಯೊಳಗೇ ಸುರಕ್ಷಿತವಾಗಿರಬೇಕು. ಸಾರ್ವಜನಿಕವಾಗಿ ಹೊರಬಂದರೆ ದೊಡ್ಡ ಮಟ್ಟದ ವಿನಾಶಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಇಸ್ಲಾಂ ಪರ್ದಾ ಪದ್ಧತಿಯನ್ನು ಸೂಚಿಸಿದೆ” ಎಂದು ವ್ಯಾಖ್ಯಾನಿಸಿದರು.
ಹೇಳಿಕೆಗೆ ಸಮರ್ಥನೆ
ಮಹಿಳೆಯರನ್ನು ಮನೆಯಲ್ಲಿಡಬೇಕು ಎನ್ನುವುದು ಅವರನ್ನು ಕೀಳಾಗಿ ಕಾಣುವುದಕ್ಕಲ್ಲ, ಬದಲಾಗಿ ಅವರಿಗೆ ನೀಡುವ ಆತ್ಮಾಭಿಮಾನ ಹಾಗೂ ರಕ್ಷಣೆಗಾಗಿ ಎಂದು ಗ್ರ್ಯಾಂಡ್ ಮುಫ್ತಿ ಪ್ರತಿಪಾದಿಸಿದ್ದಾರೆ. ಪ್ರವಾದಿ ಇಸ್ಲಾಂ ಧರ್ಮವನ್ನು ತರುವುದಕ್ಕಿಂತ ಮೊದಲು ಅರೇಬಿಯಾದಲ್ಲಿದ್ದ ಹೆಣ್ಣು ಭ್ರೂಣ ಹತ್ಯೆಯನ್ನು ಇಸ್ಲಾಂ ತಡೆದಿತ್ತು ಮತ್ತು ಮಹಿಳೆಯರಿಗೆ ಆಸ್ತಿ ಹಕ್ಕನ್ನು ನೀಡಿ ಗೌರವಿಸಿದೆ ಎಂಬುದನ್ನು ಅವರು ನೆನಪಿಸಿದರು. ‘ಸಮಸ್ತ ಕೇರಳ ಜಮೀಯತುಲ್ ಉಲಮಾ’ ಕಳೆದ 100 ವರ್ಷಗಳಿಂದ ಈ ಸಿದ್ಧಾಂತವನ್ನೇ ಬೋಧಿಸಿಕೊಂಡು ಬಂದಿದ್ದು, ಇದರಿಂದಾಗಿಯೇ ದೇಶದ ಮುಸ್ಲಿಂ ಮಹಿಳೆಯರು ತಮ್ಮ ಘನತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಪ್ರಶ್ನಿಸುವವರಿಗೆ ಖಡಕ್ ಎಚ್ಚರಿಕೆ
ತಮ್ಮ ಹೇಳಿಕೆಗಳನ್ನು ಪ್ರಶ್ನಿಸುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಕಿಡಿಕಾರಿದ ಕಾಂತಪುರಂ, “ನಾವು ಧರ್ಮವನ್ನು ಕೂಲಂಕಶವಾಗಿ ಅಧ್ಯಯನ ಮಾಡಿದ್ದೇವೆ. ಹೀಗಾಗಿ ನಮ್ಮ ಸಮುದಾಯಕ್ಕೆ ಬೋಧನೆ ಮಾಡುವ ಅಧಿಕಾರ ಮತ್ತು ಜವಾಬ್ದಾರಿ ನಮಗಿದೆ. ಇದನ್ನು ನಾವು ಹೇಳುತ್ತಲೇ ಇರುತ್ತೇವೆ, ಯಾರಿಂದಲೂ ಇದನ್ನು ತಡೆಯಲು ಸಾಧ್ಯವಿಲ್ಲ” ಎಂದು ಸವಾಲು ಎಸೆದಿದ್ದಾರೆ. ತಾವು ಇತರ ಧರ್ಮಗಳ ಆಚರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ತಮ್ಮ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಹಕ್ಕನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ : ‘ಪಾಕ್ ಚಾಪ್ಟರ್ ಕ್ಲೋಸ್, ನಾನೀಗ ಬ್ರಿಟಿಷ್ ಪ್ರಜೆ’ : ಇಂಗ್ಲೆಂಡ್ ದೇಶಿ ಕ್ರಿಕೆಟ್‌ಗೆ ಮುಡಿಪಾದ ಮೊಹಮ್ಮದ್ ಆಮಿರ್



















