ಬೆಂಗಳೂರು : ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ 8ನೇ ವೇತನ ಆಯೋಗವು (8th Pay Commission) ಕೇಂದ್ರ ಸರ್ಕಾರದ ನೌಕರರ ಸಂಘಟನೆಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲು ಸಜ್ಜಾಗಿದೆ. ಇದರ ಭಾಗವಾಗಿ ಅಕ್ಟೋಬರ್ 7 ಮತ್ತು 8 ರಂದು ಬೆಂಗಳೂರಿನಲ್ಲಿ ವಿಶೇಷ ಸಭೆಗಳು ನಡೆಯಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಸಭೆಗಳಲ್ಲಿ ಭಾಗವಹಿಸಲು ಬಯಸುವ ಕೇಂದ್ರ ಸರ್ಕಾರದ ನೌಕರರ ಸಂಘಟನೆಗಳು, ಸಂಸ್ಥೆಗಳು ಮತ್ತು ಒಕ್ಕೂಟಗಳು ಸೆಪ್ಟೆಂಬರ್ 18ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಜ್ಞಾಪಕ ಪತ್ರವನ್ನು (Memorandum) ಸಲ್ಲಿಸಿದ ನಂತರ ಕ್ರಿಯೇಟ್ ಆಗುವ ‘ಯೂನಿಕ್ ಮೆಮೋ ಐಡಿ’ (Unique Memo ID) ಒದಗಿಸುವುದು ಕಡ್ಡಾಯವಾಗಿದೆ.
ದೇಶಾದ್ಯಂತ ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳು, ಪಿಂಚಣಿ ಮತ್ತು ಇತ್ಯಾದಿ ಸೇವಾ ಸುಧಾರಣೆಗಳ ಕುರಿತು ಅಹವಾಲುಗಳು ಹಾಗೂ ಸಲಹೆಗಳನ್ನು ಆಲಿಸಲು ಆಯೋಗವು ವಿವಿಧ ನಗರಗಳಲ್ಲಿ ಸಭೆಗಳನ್ನು ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ನೌಕರರ ಸಂಘಟನೆಗಳಿಗೆ ತಮ್ಮ ಬೇಡಿಕೆಗಳು ಮತ್ತು ಅಭಿಪ್ರಾಯಗಳನ್ನು ನೇರವಾಗಿ ಆಯೋಗದ ಮುಂದೆ ಮಂಡಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.
ಆಸಕ್ತ ಅರ್ಹ ಸಂಘಟನೆಗಳು ನಿಗದಿತ ಗಡುವಿನ ಮುಂಚಿತವಾಗಿ ಅಧಿಕೃತ ಪೋರ್ಟಲ್ ಮೂಲಕ ಅಪಾಯಿಂಟ್ ಮೆಂಟ್ ಕೋರಿಕೆಯನ್ನು ಸಲ್ಲಿಸಬೇಕು. ಸಭೆಯ ನಿಖರವಾದ ಸ್ಥಳ ಮತ್ತು ವೇಳಾಪಟ್ಟಿಯನ್ನು ನಂತರ ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರು ಅರ್ಜಿಗಳನ್ನು ಸಲ್ಲಿಸಲು https://8cpc.gov.in/ ಗೆ ಭೇಟಿ ನೀಡಬಹುದು.
ಇದನ್ನೂ ಓದಿ : 2028ರ ಚುನಾವಣೆಗೆ ಬಿಜೆಪಿ ರಣತಂತ್ರ ; ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ 170 ಕಿ.ಮೀ. ಪಾದಯಾತ್ರೆ



















