ಬೆಂಗಳೂರು : ಸೆಪ್ಟೆಂಬರ್‌ನಲ್ಲಿ ಗಣೇಶ ಚತುರ್ಥಿ. ವಿಘ್ನ ನಿವಾರಕನ ಹಬ್ಬದ ವೇಳೆಯೇ ಹೊಸ ಕಾರು ಖರೀದಿಸಬೇಕು. ಅದರಲ್ಲೂ, ಸುರಕ್ಷತೆಗೆ ಹೆಸರಾಗಿರುವ ಟಾಟಾ ಕಾರುಗಳನ್ನು ಖರೀದಿಸಬೇಕು ಎಂದು ನಿರ್ಧರಿಸಿದವರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಟಾಟಾ ಮೋಟರ್ಸ್ ಕಂಪನಿಯು 2026ರ ಸೆಪ್ಟೆಂಬರ್ 1 ರಿಂದ ಹಲವು ಕಾರುಗಳ ಬೆಲೆಯನ್ನು ಏರಿಕೆ ಮಾಡಲು ತೀರ್ಮಾನಿಸಿದೆ. ಇದು ಗ್ರಾಹಕರಿಗೆ ಭಾರಿ ಹೊರೆಯಾಗಲಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳು ಮತ್ತು ವಿದ್ಯುತ್ ಚಾಲಿತ ಕಾರುಗಳ ಬೆಲೆಯನ್ನು 25 ಸಾವಿರ ರೂಪಾಯಿವರೆಗೆ ಏರಿಕೆ ಮಾಡಿದೆ. ಆಯಾ ಕಾರುಗಳ ಮಾದರಿಯ ಅನ್ವಯ 25 ಸಾವಿರ ರೂಪಾಯಿ ಏರಿಕೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮಾರುತಿ ಸುಜುಕಿ ಮತ್ತು ಹುಂಡೈ ಮೋಟಾರ್ ಇಂಡಿಯಾ ಕಾರುಗಳ ಬೆಲೆ ಏರಿಕೆ ಘೋಷಿಸಿವೆ. ಈಗ ಮತ್ತೊಂದು ಕಂಪನಿಯು ಬೆಲೆಯೇರಿಕೆ ಘೋಷಿಸಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಬೆಲೆ ಪರಿಷ್ಕರಣೆಯು ಟಾಟಾದ ಟಿಯಾಗೊ, ಆಲ್ಟ್ರೋಜ್, ಟಿಗೋರ್, ಪಂಚ್, ನೆಕ್ಸಾನ್, ಕರ್ವ್, ಸಿಯೆರಾ, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ಭಾರತದಲ್ಲಿನ ಸಂಪೂರ್ಣ ಪ್ಯಾಸೆಂಜರ್ ವಾಹನಗಳಿಗೆ. ಇದು ಟಿಯಾಗೊ, ಟಿಗೋರ್, ಪಂಚ್, ನೆಕ್ಸಾನ್, ಕರ್ವ್, ಸಿಯೆರಾ ಮತ್ತು ಹ್ಯಾರಿಯರ್ ವಾಹನಗಳ ಎಲೆಕ್ಟ್ರಿಕ್ (EV) ಕಾರುಗಳಿಗೂ ಅನ್ವಯಿಸುತ್ತದೆ.
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಕಾರುಗಳ ತಯಾರಿಕೆಗೆ ಬಳಸುವ ಉಪಕರಣಗಳು, ಕಚ್ಚಾವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದರಿಂದ ಆಟೋಮೊಬೈಲ್ ಕಂಪನಿಗಳು ಬೆಲೆಯೇರಿಕೆ ಮಾಡುತ್ತಿವೆ ಎಂದು ವರದಿಯಾಗಿದೆ. ಪ್ರಸಕ್ತ ವರ್ಷದಲ್ಲಿಯೇ ಟಾಟಾ ಇದುವರೆಗೆ ಮೂರು ಬಾರಿ ಬೆಲೆಯೇರಿಕೆ ಘೋಷಿಸಿದೆ. ಕಳೆದ ಜುಲೈ 1ರಂದು ಬೆಲೆಯೇರಿಕೆ ಜಾರಿಗೆ ತಂದಿತ್ತು. ಇದರ ಬೆನ್ನಲ್ಲೇ, ಬೆಲೆಯೇರಿಕೆ ಮಾಡಲಾಗಿದೆ.
ಇದನ್ನೂ ಓದಿ : ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್ ; ಬೆಲೆ ಎಷ್ಟು?



















