ವಿಜಯನಗರ : ಪ್ರವಾಸಕ್ಕೆಂದು ಬಂದಿದ್ದ ತಾಯಿ ಹಾಗೂ ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ನಿವಾಸಿಗಳಾದ ಶಾಹೀನ್ (38) ಹಾಗೂ ಯಾಸ್ಮೀನ್ (13) ನಾಪತ್ತೆಯಾದ ತಾಯಿ-ಮಗಳು. ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ತಾಯಿ-ಮಗಳು, ನದಿಯ ಸ್ನಾನಘಟ್ಟದ ಬಳಿ ಅಡುಗೆ ಮಾಡಿಕೊಂಡ ಬಳಿಕ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಕಾಲುಜಾರಿ ನದಿಗೆ ಬಿದ್ದು ಇಬ್ಬರೂ ನೀರಿನಲ್ಲಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಪತ್ತೆಯಾಗಿರುವ ತಾಯಿ-ಮಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.


















