ನವದೆಹಲಿ: ದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೆಲೆಟ್ ಗನ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 19 ವರ್ಷದ ಸಾಹಿಲ್ ಲೋಚಾವ್ ಎಂಬ ಯುವಕನ ದೂರಿಗೆ ಸಂಬಂಧಿಸಿದಂತೆ ಕೊನೆಗೂ ದೆಹಲಿ ಪೊಲೀಸರು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ದೂರು ನೀಡಲು ಅಲೆದಾಡುತ್ತಿದ್ದ ತನಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಬಲವಾಗಿ ನಿಂತು ಪೊಲೀಸ್ ಠಾಣೆಯಲ್ಲೇ ಪ್ರತಿಭಟನೆ ನಡೆಸಿದ್ದರಿಂದಲೇ ಎಫ್ಐಆರ್ ದಾಖಲಾಗಿದೆ ಎಂದು ಸಾಹಿಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಆರೋಗ್ಯ ವಿಚಾರಿಸಿ ನೇರವಾಗಿ ಕಣಕ್ಕಿಳಿದ ರಾಹುಲ್ ಗಾಂಧಿ
ಜುಲೈ 20 ರಂದು ಜಂತರ್ ಮಂತರ್ ಬಳಿ ನಡೆದ ಘಟನೆಯಲ್ಲಿ ಸಾಹಿಲ್ ಕಣ್ಣಿನ ಭಾಗಕ್ಕೆ ಪೆಲೆಟ್ ಗನ್ ಗುಂಡು ತಗಲಿ ತೀವ್ರ ಗಾಯವಾಗಿತ್ತು. ಲೇಡಿ ಹಾರ್ಡಿಂಗ್ ಮತ್ತು ಏಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಅವರ ಕಣ್ಣಿನ ದೃಷ್ಟಿ ಇನ್ನೂ ಮಂಜಾಗಿಯೇ ಇದೆ. ಈ ಕುರಿತು ಆಗಸ್ಟ್ 14 ರಂದೇ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇತ್ತೀಚೆಗೆ ಸಾಹಿಲ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದ ರಾಹುಲ್ ಗಾಂಧಿ, ದೂರು ದಾಖಲಾಗದ ವಿಷಯ ತಿಳಿದ ತಕ್ಷಣ “ನಾಳೆನೇ ಸಿಗೋಣ, ನಾನೇ ಬಂದು ಎಫ್ಐಆರ್ ದಾಖಲಿಸುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದರು.
ಠಾಣೆಗಳ ನಡುವೆ ಅಲೆದಾಡಿಸಿದ್ದ ಪೊಲೀಸರು
ಸಾಹಿಲ್ ಅವರ ಪರ ವಕೀಲರು ನೀಡಿರುವ ಮಾಹಿತಿ ಪ್ರಕಾರ, ದೂರು ನೀಡಲು ಹೋದಾಗ ಕನ್ನಾಟ್ ಪ್ಲೇಸ್ ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳ ನಡುವೆ ವ್ಯಾಪ್ತಿಯ ನೆಪ ಹೇಳಿ ಪೊಲೀಸರು ಪರಸ್ಪರ ಜಾರಿಕೊಳ್ಳುತ್ತಿದ್ದರು. ವೈದ್ಯಕೀಯ ವರದಿಯಲ್ಲಿ ರಕ್ತಸ್ರಾವ ಮತ್ತು ಗಂಭೀರ ಗಾಯಗಳಾಗಿವೆ ಎಂದು ಸ್ಪಷ್ಟವಾಗಿ ಉಲ್ಲೇಖವಿದ್ದರೂ ದೂರು ಸ್ವೀಕರಿಸಲು ವಿಳಂಬ ಮಾಡಲಾಗಿತ್ತು.
8 ಗಂಟೆ ಧರಣಿ, ಅಂತಿಮವಾಗಿ ಮಣಿದ ದೆಹಲಿ ಪೊಲೀಸ್
ಶುಕ್ರವಾರ ರಾಹುಲ್ ಗಾಂಧಿ ಅವರು ಸ್ವತಃ ಸಂತ್ರಸ್ತ ಯುವಕನೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಆಗಮಿಸಿ ಧರಣಿ ಕುಳಿತ ನಂತರ, ಸುದೀರ್ಘ 8 ಗಂಟೆಗಳ ಕಾಲ ಸತತ ಪ್ರಯತ್ನದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. “ವಿಪಕ್ಷ ನಾಯಕರು ಬೆಂಬಲವಾಗಿ ನಿಲ್ಲದಿದ್ದರೆ ಬಹುಶಃ ನನ್ನ ದೂರು ದಾಖಲಾಗುತ್ತಲೇ ಇರಲಿಲ್ಲ. ನ್ಯಾಯ ಸಿಗುವ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆ” ಎಂದು ಸಾಹಿಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


















