ನವದೆಹಲಿ : ಭಾರತೀಯ ಅಂಚೆ ಇಲಾಖೆಯು ತನ್ನ ಜನಪ್ರಿಯ ‘ಗ್ರಾಮೀಣ ಅಂಚೆ ಜೀವ ವಿಮೆ’ (RPLI) ಯೋಜನೆಯ ಅರ್ಹತಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಿಂದಾಗಿ ಹೆಚ್ಚು ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅವಕಾಶ ಸಿಗಲಿದೆ. ಅಂಚೆ ಇಲಾಖೆಯ ಎಲ್ಲ ಬ್ಯಾಂಕ್ ಗಳಲ್ಲಿ (ಶೆಡ್ಯೂಲ್ಡ್ ಬ್ಯಾಂಕ್) ಖಾತೆ ಹೊಂದಿದ ಎಲ್ಲರಿಗೂ ವಿಮಾ ಸೌಲಭ್ಯ ಸಿಗಲಿದೆ.
ಹೊಸ ಬದಲಾವಣೆಗಳೇನು?
ಈ ಹಿಂದೆ, ಆರ್ ಪಿಎಲ್ ಐ ಯೋಜನೆಯು ಮುಖ್ಯವಾಗಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಇನ್ನು ಮುಂದೆ ಆ ನಿಯಮ ಸಡಿಲಿಕೆಯಾಗಿದೆ. ಈಗ, ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ (POSB) ಸಕ್ರಿಯ ಉಳಿತಾಯ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬರೂ ಈ ಜೀವ ವಿಮಾ ಯೋಜನೆಗೆ ಅರ್ಹರಾಗಿರುತ್ತಾರೆ. ಅಂದರೆ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದು ಮಾತ್ರ ಇನ್ನು ಮುಂದೆ ಕಡ್ಡಾಯ ಅರ್ಹತೆಯಾಗಿರುವುದಿಲ್ಲ. ನಗರ ಪ್ರದೇಶಗಳಲ್ಲಿರುವವರಿಗೂ ವಿಮಾ ಸೌಲಭ್ಯ ಲಭಿಸಲಿದೆ.
ದಾಖಲೆಗಳ ಸಲ್ಲಿಕೆ ಈಗ ಸರಳ
ಈ ಯೋಜನೆಯನ್ನು ಪಡೆಯುವಾಗ ಬ್ಯಾಂಕ್ ಖಾತೆಯ ಪುರಾವೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಗ್ರಾಹಕರು ಭೌತಿಕ ಬ್ಯಾಂಕ್ ಪ್ರಮಾಣಪತ್ರಗಳನ್ನು ಪಡೆಯಲು ಅಲೆಯಬೇಕಿಲ್ಲ. ಬದಲಾಗಿ, ಡಿಜಿಟಲ್ ದಾಖಲೆಗಳಾದ ಪಾಸ್ ಬುಕ್ ನ ಮಾಹಿತಿ, ಮೊಬೈಲ್ ಬ್ಯಾಂಕಿಂಗ್ ಸ್ಕ್ರೀನ್ ಶಾಟ್ ಗಳು, ಇಮೇಲ್ ಮೂಲಕ ಬಂದ ಬ್ಯಾಂಕ್ ಸ್ಟೇಟ್ ಮೆಂಟ್ ಗಳು ಅಥವಾ ಎಟಿಎಂ ಮಿನಿ ಸ್ಟೇಟ್ ಮೆಂಟ್ ಗಳನ್ನು ಸಾಕ್ಷಿಯಾಗಿ ಬಳಸಬಹುದು ಎಂದು ಇಲಾಖೆ ತಿಳಿಸಿದೆ.
ಆರ್ಪಿಎಲ್ಐ ವಿಶೇಷತೆಗಳು
- ಉದ್ದೇಶ : ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವುದು.
- ವಿಮಾ ಮೊತ್ತ : 10 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ವಿಮಾ ಮೊತ್ತದ ಆಯ್ಕೆಗಳು ಲಭ್ಯವಿದೆ.
- ಸಾಲ ಸೌಲಭ್ಯ : ಪಾಲಿಸಿ ಆರಂಭವಾದ 4 ವರ್ಷಗಳ ನಂತರ ನಿಯಮಾನುಸಾರ ಸಾಲ ಪಡೆಯುವ ಅವಕಾಶವಿದೆ.
- ಸರೆಂಡರ್ ನಿಯಮ : 3 ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡಲು ಅವಕಾಶವಿದ್ದರೂ, 5 ವರ್ಷಗಳು ಪೂರ್ಣಗೊಳ್ಳುವ ಮುನ್ನ ಸರೆಂಡರ್ ಮಾಡಿದರೆ ಬೋನಸ್ ಸೌಲಭ್ಯ ಸಿಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.
ಇದನ್ನೂ ಓದಿ : ‘ಲೋಪ ಸರಿಪಡಿಸಿ, ಇಲ್ಲವೇ ಮತ್ತೆ ಹೋರಾಟಕ್ಕಿಳಿಯುವೆ’ : ಕೇಂದ್ರಕ್ಕೆ ಬಾಬಾ ರಾಮ್ದೇವ್ ಎಚ್ಚರಿಕೆ!


















