ಬೆಂಗಳೂರು: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಗಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲಿ ಆಕರ್ಷಕವಾಗಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಅವರು, ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಬ್ಯಾಟರ್ ಎಂಬ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ಸುದೀರ್ಘ ಇತಿಹಾಸದಲ್ಲಿ ಈವರೆಗೆ ಯಾವುದೇ ಭಾರತೀಯ ಆಟಗಾರ ಆಗಸ್ಟ್ 15ರಂದು ಶತಕ ಬಾರಿಸಿದ ಉದಾಹರಣೆಗಳಿರಲಿಲ್ಲ. ಆದರೆ, ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಕದನದ ಮೂರನೇ ಅವಧಿಯಲ್ಲಿ (ಸೆಷನ್) ಅತ್ಯಂತ ಜವಾಬ್ದಾರಿಯುತವಾಗಿ ಶತಕ ಪೂರೈಸಿದ ದೇವದತ್ ಪಡಿಕ್ಕಲ್, ಈ ಅಪರೂಪದ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರರಾಗಿ ಹೊರಹೊಮ್ಮಿದರು. ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿರುವ ಹೊತ್ತಿನಲ್ಲೇ ಮೂಡಿಬಂದಿರುವ ಕನ್ನಡಿಗನ ಈ ಐತಿಹಾಸಿಕ ಶತಕ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ಸೌರವ್ ಗಂಗೂಲಿ ಬಳಿಕ ಈ ಸಾಧನೆ ಮಾಡಿದ ಮೊದಲ ಎಡಗೈ ಬ್ಯಾಟರ್
ಸ್ವಾತಂತ್ರ್ಯ ದಿನದ ಶತಕದ ಜೊತೆಗೆ ಪಡಿಕ್ಕಲ್ ಮತ್ತೊಂದು ವಿಶಿಷ್ಟ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕ್ರಿಕ್‌ಬಜ್ ಅಂಕಿ-ಅಂಶಗಳ ಪ್ರಕಾರ, 21ನೇ ಶತಮಾನದಲ್ಲಿ ಭಾರತದ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟೆಸ್ಟ್ ಶತಕ ಸಿಡಿಸಿದ ಕೇವಲ ಎರಡನೇ ಎಡಗೈ ಬ್ಯಾಟರ್ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಈ ಸಾಧನೆಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಮಾತ್ರ ಮಾಡಿದ್ದರು. ಸಾಯಿ ಸುದರ್ಶನ್ ಅವರ ಅನುಪಸ್ಥಿತಿಯಲ್ಲಿ ಪ್ರಮುಖ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 3ನೇ ಕ್ರಮಾಂಕದಲ್ಲಿ ಆಡಿ ಶತಕ ಸಿಡಿಸಿದ ಎಡಗೈ ಆಟಗಾರರ ಸಂಖ್ಯೆ ತೀರಾ ವಿರಳ. ಇಂದಿನ ಈ ಶತಕದೊಂದಿಗೆ ದೇವದತ್ ಪಡಿಕ್ಕಲ್ ಅವರು ಸಲೀಂ ದುರಾನಿ, ಬಾಪು ನಾಡಕರ್ಣಿ, ಅಜಿತ್ ವಾಡೇಕರ್, ಏಕನಾಥ್ ಸೋಲ್ಕರ್ ಹಾಗೂ ಸುರೀಂದರ್ ಅಮರನಾಥ್ ಅವರಂತಹ ದಂತಕಥೆಗಳನ್ನೊಳಗೊಂಡ ಎಡಗೈ ಬ್ಯಾಟರ್‌ಗಳ ಗಣ್ಯರ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭವಿಷ್ಯದಲ್ಲಿ ಭಾರತದ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಪಡಿಕ್ಕಲ್ ಭರವಸೆಯ ಆಟಗಾರನಾಗಿ ಬೆಳೆಯುವ ಎಲ್ಲಾ ಮುನ್ಸೂಚನೆಗಳನ್ನು ಈ ಇನಿಂಗ್ಸ್ ನೀಡಿದೆ.
ಇದನ್ನೂ ಓದಿ : ಜೀವ ಬೆದರಿಕೆ ಪತ್ರಗಳ ಬಗ್ಗೆ ಮೌನ ಮುರಿದ ಸೌರವ್ ಗಂಗೂಲಿ : ಕೋಲ್ಕತ್ತಾ ಪೊಲೀಸರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ‘ದಾದಾ’



















