ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಇಂದು ಬೆಳಗ್ಗೆ ಬಿರ್ಭೂಮ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಸಿ ಕಚೇರಿ ರಾಂಪುರ್ಹತ್ ನಗರದ ಬ್ಯಾನರ್ಜಿ ಅವರ ನಿವಾಸದ ಸಮೀಪವೇ ಇದೆ. ಪೊಲೀಸರು ಹೆಚ್ಚಿನ ವಿವರಗಳನ್ನ ಬಹಿರಂಗಪಡಿಸಿಲ್ಲ. ಆಶೀಶ್ ಅವರ ನಿವಾಸದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.ಸದ್ಯ ಅವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಪೊಲೀಸರು ವಿವರಿಸಿದ್ದಾರೆ.
ಆಶಿಶ್ ಬ್ಯಾನರ್ಜಿ ಅವರು ರಾಂಪುರ್ಹತ್ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಶಾಲಾ ಶಿಕ್ಷಣ, ಕೃಷಿ ಮತ್ತು ಆಯುಷ್ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ರಾಜ್ಯ ವಿಧಾನಸಭೆಯ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಧ್ರುಬಾ ಸಹಾ ವಿರುದ್ಧ ಪರಾಭವಗೊಂಡಿದ್ದರು.
ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಕಚೇರಿಯ ಬಳಿ ಜಮಾಯಿಸಿದ್ದು, ಇಡೀ ಘಟನೆಯಿಂದ ತೃಣಮೂಲ ಕಾಂಗ್ರೆಸ್‌ನ ಎರಡೂ ಬಣದ ಮುಖಂಡರು ಹಾಗೂ ಬೆಂಬಲಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.



















