ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಋತುವಿನಲ್ಲಿ ಗಾಯಗೊಂಡು ಹಲವು ತಿಂಗಳುಗಳ ಕಾಲ ಮೈದಾನದಿಂದ ದೂರ ಉಳಿದಿದ್ದ ಯುವ ಉದಯೋನ್ಮುಖ ತಾರೆ ಆಂಗ್ಕ್ರಿಶ್ ರಘುವಂಶಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅವರು, ಮುಂಬರುವ ಡಾ. (ಕ್ಯಾಪ್ಟನ್) ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ 2026-27ರ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಲೋಕಕ್ಕೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪ್ರಮುಖ ಭರವಸೆಯ ಬ್ಯಾಟರ್ ಆಗಿದ್ದ 22 ವರ್ಷದ ಆಂಗ್ಕ್ರಿಶ್ ರಘುವಂಶಿ, 2026ರ ಐಪಿಎಲ್ ಟೂರ್ನಿಯ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯದ ತೀವ್ರತೆಯಿಂದಾಗಿ ಅವರು ಲೀಗ್ನ ಕೊನೆಯ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಂದಿನಿಂದ ಇದುವರೆಗೂ ಅವರು ಯಾವುದೇ ವೃತ್ತಿಪರ ಕ್ರಿಕೆಟ್ ಪಂದ್ಯಗಳನ್ನಾಡಿರಲಿಲ್ಲ. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಮೈದಾನಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ.
ಮುಂಬೈ ತಂಡಕ್ಕೆ ಮರಳಿದ ಆಂಗ್ಕ್ರಿಶ್
ಆಗಸ್ಟ್ 28 ರಿಂದ ಸೆಪ್ಟೆಂಬರ್ 11 ರವರೆಗೆ ಪುದುಚೇರಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಡಾ. (ಕ್ಯಾಪ್ಟನ್) ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಪ್ರಕಟಿಸಿರುವ ತಂಡದಲ್ಲಿ ಆಂಗ್ಕ್ರಿಶ್ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯ ಮೂಲಕ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮುಂಬೈ ತಂಡದ ಮುಖ್ಯ ಆಯ್ಕೆಗಾರ ರಾಜೇಶ್ ಪವಾರ್, “ಆಂಗ್ಕ್ರಿಶ್ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಆದರೆ ಮತ್ತೋರ್ವ ಯುವ ಆಟಗಾರ ಆಯುಷ್ ಮ್ಹಾತ್ರೆ ಗಾಯದಿಂದ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ಸುವೇದ್ ಪಾರ್ಕರ್ ಅವರಿಗೆ ಮುಂಬೈ ತಂಡದ ನಾಯಕತ್ವವನ್ನು ವಹಿಸಲಾಗಿದೆ.
ಐಪಿಎಲ್ನಲ್ಲಿ ಆಂಗ್ಕ್ರಿಶ್ ಆರ್ಭಟ
ಕಳೆದ ಕೆಲವು ಋತುಗಳಿಂದ ಕೆಕೆಆರ್ ಪರ ಆಂಗ್ಕ್ರಿಶ್ ರಘುವಂಶಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 2025 ಮತ್ತು 2026ರ ಸತತ ಎರಡು ಐಪಿಎಲ್ ಆವೃತ್ತಿಗಳಲ್ಲಿ ಅವರು 300ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಅದರಲ್ಲೂ 2026ರ ಐಪಿಎಲ್ನಲ್ಲಿ, 13 ಪಂದ್ಯಗಳಿಂದ ಬರೋಬ್ಬರಿ 422 ರನ್ ಸಿಡಿಸಿ ತಂಡದ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. 146.52ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಅವರು ಐದು ಆಕರ್ಷಕ ಅರ್ಧಶತಕಗಳನ್ನು ಸಹ ಸಿಡಿಸಿದ್ದರು. ಮುಂಬೈ ತಂಡದಲ್ಲಿ ಆಕಾಶ್ ಆನಂದ್ ಮತ್ತು ಹಾರ್ದಿಕ್ ತಮೋರ್ ರೂಪದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳಿರುವುದರಿಂದ, ಆಂಗ್ಕ್ರಿಶ್ ಈ ಟೂರ್ನಿಯಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮುಂಬೈ ತಂಡದಲ್ಲಿ ಯುವ ಪಡೆಯೇ ಸಜ್ಜು
ಆಂಗ್ಕ್ರಿಶ್ ಹೊರತಾಗಿ ಮುಂಬೈ ತಂಡವು ಅತ್ಯುತ್ತಮ ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ್ದ ಸೂರ್ಯಾಂಶ್ ಶೆಡ್ಗೆ ಕೂಡ ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು 16 ವರ್ಷದ ಯುವ ವೇಗಿ ಕಾರ್ತಿಕ್ ಕುಮಾರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಓಂಕಾರ್ ತರ್ಮಾಲೆ ಅವರನ್ನು ಸಹ ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮುಂಬೈ ತಂಡದ ಪೂರ್ಣ ವಿವರ ಹೀಗಿದೆ:
ಸುವೇದ್ ಪಾರ್ಕರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ದಿವ್ಯಾಂಶ್ ಸಕ್ಸೇನಾ, ಸೂರ್ಯಾಂಶ್ ಶೆಡ್ಗೆ, ಮಮನ್ ಭಟ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಮೋಹಿತ್ ಅವಸ್ತಿ, ಅಥರ್ವ ಅಅಂಕೋಲೇಕರ್, ಕಾರ್ತಿಕ್ ಕುಮಾರ್, ನಿಖಿಲ್ ಗಿರಿ, ಓಂಕಾರ್ ತರ್ಮಾಲೆ ಮತ್ತು ಹಿಮಾಂಶು ಸಿಂಗ್.
ಇದನ್ನೂ ಓದಿ : ಏಕದಿನ ಕ್ರಿಕೆಟ್ನಲ್ಲಿ ಜಡೇಜಾ ಯುಗಾಂತ್ಯ? ಲೆಕ್ಕಾಚಾರದಿಂದ ಹೊರಬಿದ್ದ ಸ್ಟಾರ್ ಆಲ್ರೌಂಡರ್!



















