ಬೆಂಗಳೂರು\ಬಾಗಲಕೋಟೆ : ಜಿಲ್ಲೆಯ ಐಹೊಳೆಯಲ್ಲಿ ನಡೆಯುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಹಳ್ಳಿ ಪವರ್’ ರಿಯಾಲಿಟಿ ಶೋ ಕುರಿತು ರಾಜ್ಯ ಮಹಿಳಾ ಆಯೋಗ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಟಾಸ್ಕ್‌ನಲ್ಲಿ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸೆಗಣಿ ಬಳಿಯುತ್ತಿರುವುದು ಮನೋರಂಜನೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಪರೋಕ್ಷ ದೌರ್ಜನ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಈ ಕೃತ್ಯ ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆಯುಂಟುಮಾಡುವಂತಿದ್ದು, ಮಹಿಳಾ ಸ್ಪರ್ಧಿಗಳ ಮೇಲಿನ ಗೌರವ ಹಾನಿ ಕೃತ್ಯಗಳನ್ನು ಆಯೋಗ ತೀವ್ರವಾಗಿ ಖಂಡಿಸಿದೆ. ಹಾಗೆಯೇ ಆಗಸ್ಟ್ 14ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ.
ಟಾಸ್ಕ್‌ನಲ್ಲಿ ಸೋತ ಮಹಿಳಾ ಸ್ಪರ್ಧಿಗಳ ಮುಖಕ್ಕೆ ಸೆಗಣಿ ಬಳಿಯುವುದು ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮನೋರಂಜನೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಇಂತಹ ಅಸಮರ್ಪಕ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಿದೆ.
ಹಾಗೆಯೇ ಮಹಿಳೆಯರ ಘನತೆ ಮತ್ತು ಗೌರವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಕಳುಹಿಸಬೇಕು ಎಂದು ಸೂಚಿಸಿದೆ. ಈ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಪತ್ರ ಕಳುಹಿಸಲಾಗಿದ್ದು, ಅದರ ಪ್ರತಿಯನ್ನು ಐಹೊಳೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೂ ಕಳುಹಿಸಲಾಗಿದೆ.
ಈ ಸಂಪೂರ್ಣ ಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ. ಮಹಿಳಾ ಸ್ಪರ್ಧಿಗಳ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುವಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಹಾಗೂ ಈ ಕುರಿತು ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ಮಹಿಳಾ PSIಗೆ ಕಪಾಳಮೋಕ್ಷ ಕೇಸ್ ; 3 ದಿನದಲ್ಲಿ ಸಂಪೂರ್ಣ ತನಿಖಾ ವರದಿ ನೀಡಲು ಮಹಿಳಾ ಆಯೋಗ ಸೂಚನೆ!



















