ಅಮರಾವತಿ : ಭೂತ-ಪ್ರೇತದ ವದಂತಿಯಿಂದ ಆತಂಕಕ್ಕೊಳಗಾಗಿರುವ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಓಡಿಹೋಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಸಮಾಜಶಾಸ್ತ್ರೀಯವಾಗಿ ‘ಮಾಸ್ ಹಿಸ್ಟೀರಿಯಾ’ (ಸಾಮೂಹಿಕ ಮಾನಸಿಕ ಉದ್ವಿಗ್ನತೆ) ಎಂದು ಶಂಕಿಸಲಾಗಿರುವ ಈ ಘಟನೆಯಿಂದಾಗಿ ಒಟ್ಟು 608 ವಿದ್ಯಾರ್ಥಿಗಳು (345 ವಿದ್ಯಾರ್ಥಿನಿಯರು ಮತ್ತು 263 ವಿದ್ಯಾರ್ಥಿಗಳು) ಕಾಲ್ಕಿತ್ತಿದ್ದಾರೆ.
ಆಗಿದ್ದೇನು?
ವಸತಿ ಶಾಲೆಯ ಕೆಲವು ವಿದ್ಯಾರ್ಥಿನಿಯರು ಹಾಸ್ಟೆಲ್ ಆವರಣದಲ್ಲಿ ರಾತ್ರಿ ವೇಳೆ ಗೆಜ್ಜೆ ಶಬ್ದ, ಯಾರೋ ಜೋರಾಗಿ ನಗುವ ಹಾಗೂ ಅಳುವ ವಿಚಿತ್ರ ಶಬ್ದಗಳು ಕೇಳಿಸುತ್ತಿವೆ ಎಂದು ದೂರಿದ್ದೇ ಈ ಎಲ್ಲ ಆತಂಕಕ್ಕೆ ಕಾರಣ. ಈ ಸುದ್ದಿ ಹಾಸ್ಟೆಲ್‌ನಾದ್ಯಂತ ಹರಡುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಭಯ ದ್ವಿಗುಣಗೊಂಡು, ಪೋಷಕರನ್ನು ಕರೆಸಿ ಮನೆಗೆ ತೆರಳಲು ಮುಂದಾಗಿದ್ದಾರೆ.
ವೈದ್ಯಕೀಯ ತಪಾಸಣೆ ಮತ್ತು ಹಿಸ್ಟೀರಿಯಾ ಶಂಕೆ
ಪರಿಸ್ಥಿತಿಯ ಗಂಭೀರತೆಯನ್ನುರಿತು ಶಾಲಾ ಮುಖ್ಯೋಪಾಧ್ಯಾಯ ಸಂಜಯ್ ಚೌಧರಿ ಹಾಗೂ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ತಪಾಸಣೆಗೊಳಪಡಿಸಿದೆ. “ಪರಿಶೀಲನೆಯ ನಂತರ, ಈ ರೋಗಲಕ್ಷಣಗಳು ತೀವ್ರ ಮಾನಸಿಕ ಉದ್ವಿಗ್ನತೆ ಅಥವಾ ಹಿಸ್ಟೀರಿಯಾ (Severe Hysteria) ಸ್ಥಿತಿಗೆ ಸಂಬಂಧಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿನ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಮಾನಸಿಕ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ” ಎಂದು ಮುಖ್ಯೋಪಾಧ್ಯಾಯರು ಸ್ಪಷ್ಟಪಡಿಸಿದ್ದಾರೆ.
‘ಇದು ದೆವ್ವದ ಕೃತ್ಯವಲ್ಲ, ವದಂತಿ ನಂಬಬೇಡಿ’
ಸ್ಥಳೀಯ ಆರೋಗ್ಯ ವೈದ್ಯಾಧಿಕಾರಿ ಅಭಿಷೇಕ್ ನಾಯ್ಡು ಅವರು ಪ್ರತಿಕ್ರಿಯಿಸಿ, ಸಾರ್ವಜನಿಕರು ಹಾಗೂ ಪೋಷಕರು ಇದನ್ನು ದೆವ್ವ ಅಥವಾ ಅತೀಂದ್ರೀಯ ವಿಚಾರಗಳಿಗೆ ಜೋಡಿಸಬಾರದು ಎಂದು ಮನವಿ ಮಾಡಿದ್ದಾರೆ. “ಇದು ಕೇವಲ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ. ಇದರಲ್ಲಿ ಬೇರೆ ಯಾವುದೇ ರಹಸ್ಯವಿಲ್ಲ. ಸಾರ್ವಜನಿಕರು ವದಂತಿಗಳನ್ನು ಹರಡಬಾರದು, ಮಕ್ಕಳು ಹಾಗೂ ಪೋಷಕರು ಗಾಬರಿಪಡುವ ಅಗತ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಆಡಳಿತ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮೂಢನಂಬಿಕೆ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಕಾರ್ಯಕರ್ತರು ಕೂಡ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ : ರಾಹುಲ್ ‘ಆಲಿಂಗನ’ ವ್ಯಂಗ್ಯಕ್ಕೆ ತಿರುಗೇಟು : ಇಂದಿರಾ ಗಾಂಧಿ-ಫಿಡೆಲ್ ಕ್ಯಾಸ್ಟ್ರೋ ಹಳೆಯ ಫೋಟೋ ಹಂಚಿಕೊಂಡ ಸಂಸದ ನಿಶಿಕಾಂತ್!



















