ಇಸ್ಲಾಮಾಬಾದ್ : ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು (IWT) ಅಮಾನತಿನಲ್ಲಿಟ್ಟಿರುವ ಭಾರತದ ನಿರ್ಧಾರದಿಂದ ಕಂಗಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ತಡೆಹಿಡಿಯಲಾಗಿರುವ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕಿರುವ ನೀರಿನ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕ್ರಮ ಕೈಗೊಳ್ಳದಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ “ಪ್ರತಿಯೊಂದು ಹನಿ ನೀರು ನಮಗೆ ಕೆಂಪು ರೇಖೆ” ಎಂದು ಹೇಳುವ ಮೂಲಕ ನೇರ ಬೆದರಿಕೆ ಒಡ್ಡಿದ್ದಾರೆ.
ಶಾಂತಿಯ ಬಯಕೆಯನ್ನು ದೌರ್ಬಲ್ಯವೆನ್ನಬೇಡಿ
ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ಶಾಂತಿಪ್ರಿಯ ದೇಶ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ ಶೆಹಬಾಜ್ ಷರೀಫ್, ತಮ್ಮ ಈ ಶಾಂತಿಯ ಬಯಕೆಯನ್ನು ಭಾರತ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ. ತಮ್ಮ ಸಾರ್ವಭೌಮತ್ವಕ್ಕೆ ಯಾವುದೇ ಸವಾಲು ಎದುರಾದರೂ ಕಠಿಣವಾಗಿ ಉತ್ತರಿಸಲಾಗುವುದು ಎಂದು ಪ್ರತಿಪಾದಿಸಿದ ಅವರು, “ಪಾಕಿಸ್ತಾನದ ಪ್ರತಿಯೊಂದು ಹನಿ ನೀರು ನಮಗೆ ರೆಡ್ ಲೈನ್ ಎಂದು ಸ್ಪಷ್ಟವಾಗಿ ಘೋಷಿಸುತ್ತೇನೆ. ಭಾರತಕ್ಕೆ ಬುದ್ಧಿ ಬರದಿದ್ದರೆ, ಅದಕ್ಕೆ ನೇರವಾಗಿಯೇ ತಕ್ಕ ಉತ್ತರ ನೀಡಲಾಗುವುದು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾರತದ ವಿರುದ್ಧ ಹರಿಹಾಯ್ದ ಪಾಕ್ ಪ್ರಧಾನಿ
1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಅಮಾನತಿನಲ್ಲಿಡುವ ಮೂಲಕ ತಾನು ಶಾಂತಿಯ ಶತ್ರು ಎಂಬುದನ್ನು ನಿರೂಪಿಸಿದೆ ಎಂದು ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ. ಕಳೆದ ವರ್ಷದ ಯುದ್ಧದ ಸೋಲಿನ ನಂತರ ಭಾರತ ಈ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಒಪ್ಪಂದ ಅಮಾನತಿಗೆ ಹಿನ್ನೆಲೆ
2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಹತರಾಗಿದ್ದರು. ಪಾಕಿಸ್ತಾನ ಪೋಷಿತ ಭಯೋತ್ಪಾದಕರೇ ಈ ಕೃತ್ಯಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದ ಭಾರತ, ಪ್ರತೀಕಾರವೆಂಬಂತೆ ಈ ಐತಿಹಾಸಿಕ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು.
ಈ ನಿರ್ಧಾರದ ನಂತರ ಭಾರತವು ಪಶ್ಚಿಮ ನದಿಗಳ ನೀರಿನ ಮಟ್ಟಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು (ಡೇಟಾ) ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ. ಮುಂಗಾರು ವೇಳೆಯಲ್ಲಿ ಭಾರತ ನೀಡುತ್ತಿದ್ದ ಮುನ್ನೆಚ್ಚರಿಕೆ ಮಾಹಿತಿಗಳು ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ನೆರವಾಗುತ್ತಿದ್ದವು.
ಸಿಂಧೂ ಒಪ್ಪಂದದ ಪ್ರಮುಖಾಂಶಗಳು
ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಅಂತಿಮಗೊಂಡ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯನ್ನು ನಿಯಂತ್ರಿಸುತ್ತದೆ. ಈ ಒಪ್ಪಂದದ ಪ್ರಕಾರ ಸಿಂಧೂ ನದಿ ವ್ಯವಸ್ಥೆಯ ಶೇ. 20ರಷ್ಟು ನೀರನ್ನು ಭಾರತಕ್ಕೆ ಮತ್ತು ಶೇ.80ರಷ್ಟು ನೀರನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಪಶ್ಚಿಮದ ನದಿಗಳಾದ ಸಿಂಧೂ, ಜೇಲಂ ಮತ್ತು ಚಿನಾಬ್ ನದಿಗಳನ್ನು ಪಾಕಿಸ್ತಾನಕ್ಕೆ ಹಾಗೂ ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳನ್ನು ಭಾರತಕ್ಕೆ ಹಂಚಿಕೆ ಮಾಡಲಾಗಿದೆ. ಈ ಒಪ್ಪಂದವು ಕಾನೂನುಬದ್ಧವಾಗಿ ಜಾರಿಯಲ್ಲಿದೆ ಎಂದು ವಾದಿಸುತ್ತಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ.
ಇದನ್ನೂ ಓದಿ : ‘ಬುಮ್ರಾ ರಾಷ್ಟ್ರೀಯ ಸಂಪತ್ತು, ಅವರನ್ನು ಜತನದಿಂದ ಕಾಪಾಡಿಕೊಳ್ಳಿ’ : ಆಕಾಶ್ ಚೋಪ್ರಾ ಮಹತ್ವದ ಹೇಳಿಕೆ



















