ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಜೆ.ಪಿ. ನಡ್ಡಾ ಅವರಿಗೆ ಏಕಾಏಕಿ ಅಸ್ವಸ್ಥತೆ ಉಂಟಾಗಿದ್ದು, ಕೂಡಲೇ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ ಅವರಿಗೆ ಎದೆ ಬಿಗಿತ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆತರಲಾಗಿದ್ದು, ತಕ್ಷಣವೇ ಹೃದಯ ಸಂಬಂಧಿ ಕೊರೊನರಿ ಆಂಜಿಯೋಗ್ರಫಿ (Coronary Angiography) ತಪಾಸಣೆಗೆ ಒಳಪಡಿಸಲಾಗಿದೆ.
ಜೆ.ಪಿ. ನಡ್ಡಾ ಅವರ ಆರೋಗ್ಯ ಸ್ಥಿತಿಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಏಮ್ಸ್ ಆಸ್ಪತ್ರೆ ವೈದ್ಯರು, “ಆಗಸ್ಟ್ 13ರ ಸಂಜೆ ಅಸ್ವಸ್ಥಗೊಂಡಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಆಂಜಿಯೋಗ್ರಫಿ ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಏಮ್ಸ್‌ನ ಹೃದ್ರೋಗ ವಿಭಾಗದಲ್ಲಿ ವೈದ್ಯರ ತೀವ್ರ ನಿಗಾದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.
196 ಡಿಸೆಂಬರ್ 2ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಜೆ.ಪಿ. ನಡ್ಡಾ ಅವರು ಮೂಲತಃ ಹಿಮಾಚಲ ಪ್ರದೇಶದವರು. ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಶಿಕ್ಷಣ ಪೂರೈಸಿದ ಇವರು, ಜಯಪ್ರಕಾಶ್ ನಾರಾಯಣ್ ಅವರ ಚಳವಳಿಗಳ ಮೂಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ಬೆಳೆದ ನಡ್ಡಾ, 1989 ರಲ್ಲಿ ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. 1991ರಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.
ಸುದೀರ್ಘ ರಾಜಕೀಯ ಅನುಭವ
1993 ರಲ್ಲಿ ಪ್ರಥಮ ಬಾರಿಗೆ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಡ್ಡಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದರು. 1998 ರಲ್ಲಿ ಮರುಆಯ್ಕೆಯಾಗಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾದರು. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಇವರು, 2012 ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
ನಂತರ 2014 ರಿಂದ 2019 ರವರೆಗೆ ಪ್ರಧಾನಿ ಮೋದಿ ಅವರ ಮೊದಲ ಸಂಪುಟದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. ಜೂನ್ 2019 ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಹಾಗೂ ಜನವರಿ 2020ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದರು. ಪ್ರಸ್ತುತ ಅವರು ಮತ್ತೆ ಕೇಂದ್ರ ಆರೋಗ್ಯ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : “ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ವಿಚಾರ, ಬಿಸಿಐ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ” : ಬಾರ್ ಕೌನ್ಸಿಲ್‌ಗೆ ಸಿಜೆಐ ತರಾಟೆ



















