ನವದೆಹಲಿ : ಹೈದರಾಬಾದ್‌ನ ಪ್ರತಿಷ್ಠಿತ ನಾಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮಿಶ್ರಾ ಅವರು ಮಹತ್ವದ ನಿಲುವು ತಳೆದಿದ್ದಾರೆ. “ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ವಿಚಾರ. ಇದರಲ್ಲಿ ಮಧ್ಯಪ್ರವೇಶಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಯಾರು?” ಎಂದು ಸಿಜೆಐ ಸೂರ್ಯಕಾಂತ್ ಅವರು ಬಿಸಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಸಿಐ ಸುತ್ತೋಲೆಗೆ ಸುಪ್ರೀಂ ಆಕ್ಷೇಪ
ನಾಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯನ್ಯಾಯಮೂರ್ತಿಗಳ ಭಾಗವಹಿಸುವಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಹಾಗೂ ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಐ, 2026ರ ಬ್ಯಾಚ್‌ನ ಯಾವುದೇ ಪದವೀಧರರನ್ನು ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸದಂತೆ ತಡೆಹಿಡಿದು ಸುತ್ತೋಲೆ ಹೊರಡಿಸಿತ್ತು. ಈ ನಿರ್ಧಾರಕ್ಕೆ ಆಕ್ಷೇಪಗಳು ಕೇಳಿಬರತೊಡಗಿದಂತೆ ಅದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುರುವ ಸುಪ್ರೀಂ ಕೋರ್ಟ್, ಬಿಸಿಐ ಹೊರಡಿಸಿರುವ ಸುತ್ತೋಲೆಗೆ ಸೂಕ್ತ ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ಜೊತೆಗೆ, ನಾಲ್ಸಾರ್ ವಿದ್ಯಾರ್ಥಿಗಳು ಅಥವಾ ಬೋಧಕ ಸಿಬ್ಬಂದಿಯ ವಿರುದ್ಧ ಯಾವುದೇ ರೀತಿಯ ಶಿಸ್ತು ಅಥವಾ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
‘ನಾನೂ ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಭಟನೆಯಲ್ಲಿದ್ದೆ’
ವಿಚಾರಣೆಯ ವೇಳೆ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮಿಶ್ರಾ, ಬಿಸಿಐ ನಡೆ ಅನಗತ್ಯವಾದದ್ದು ಎಂದು ಅಭಿಪ್ರಾಯಪಟ್ಟರು. “ನಾನೂ ಕೂಡ ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಷಯವಾಗಿದ್ದು, ಇಲ್ಲಿ ಬಿಸಿಐ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ” ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು. ನ್ಯಾಯಾಲಯದ ಈ ನಿಲುವಿನ ಬೆನ್ನಲ್ಲೇ ಬಿಸಿಐ ಪರ ವಕೀಲರು, ತಾನು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ಈಗಾಗಲೇ ಹಿಂಪಡೆಯಲಾಗಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಶಿಸ್ತು ಕ್ರಮಕ್ಕೆ ಮುಂದಾಗಿದ್ದ ಬಾರ್ ಕೌನ್ಸಿಲ್
ಆರಂಭದಲ್ಲಿ ಬಿಸಿಐ, ಪ್ರತಿಭಟನೆಯನ್ನು ಸಂಘಟಿಸಿದ ಮತ್ತು ಚಾಲನೆ ನೀಡಿದ ವಿದ್ಯಾರ್ಥಿಗಳ ಕುರಿತು ವರದಿ ನೀಡುವಂತೆ ನಾಲ್ಸಾರ್ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಸೂಚಿಸಿತ್ತು. ಅಲ್ಲಿಯವರೆಗೆ 2026ರ ಬ್ಯಾಚ್‌ನ ಪದವೀಧರರ ನೋಂದಣಿಯನ್ನು ತಡೆಹಿಡಿಯಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ತನ್ನ ನಿರ್ಧಾರವನ್ನು ಬದಲಿಸಿದ ಬಿಸಿಐ, ಬಹುತೇಕ ವಿದ್ಯಾರ್ಥಿಗಳು ನಿರ್ದೋಷಿಗಳಾಗಿದ್ದು, ಮುಖ್ಯನ್ಯಾಯಮೂರ್ತಿಗಳಿಗೆ ಅಗೌರವ ತೋರುವ ಉದ್ದೇಶ ಹೊಂದಿಲ್ಲ ಎಂಬ ಮಾಹಿತಿ ದೊರೆತಿದೆ ಎಂದು ಹೇಳಿ ಆದೇಶ ಹಿಂಪಡೆದಿತ್ತು.
‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಹಾರ’
ಇದಕ್ಕೂ ಮುನ್ನ, ಬಾರ್ ಕೌನ್ಸಿಲ್‌ನ ಈ ಕ್ರಮವನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ್ ಸಿಂಗ್ ತೀವ್ರವಾಗಿ ಖಂಡಿಸಿದ್ದರು. ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದ ಅವರು, “ವಿಶ್ವವಿದ್ಯಾಲಯಗಳು ಮುಕ್ತ ಆಲೋಚನೆ ಮತ್ತು ಸಂವಾದಗಳಿಗೆ ವೇದಿಕೆಯಾಗಬೇಕು. ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ನಿರ್ಧಾರವನ್ನು ವಿರೋಧಿಸಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಕಾನೂನು ವೃತ್ತಿ ಪ್ರವೇಶಿಸದಂತೆ ಬೆದರಿಕೆ ಹಾಕುವುದು ಅವರ ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಯತ್ನ” ಎಂದು ಕಿಡಿಕಾರಿದ್ದರು. ಪ್ರಸ್ತುತ ಸುಪ್ರೀಂ ಕೋರ್ಟ್‌ನ ಈ ಕಠಿಣ ನಿಲುವಿನಿಂದಾಗಿ ನಾಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗಕ್ಕೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಇದನ್ನೂ ಓದಿ : ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ



















