ಬೆಂಗಳೂರು : ಸ್ಯಾಂಡಲ್‌ವುಡ್ ನಟಿಯ ಸಹೋದರಿಯೊಬ್ಬರು ನೀಡಿದ ಅತ್ಯಾಚಾರ ಆರೋಪದ ದೂರಿನ ಆಧಾರದ ಮೇಲೆ ಚಂದ್ರಲೇಔಟ್ ಪೊಲೀಸರು ರಾಘವೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ದೂರಿನಲ್ಲಿ, ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ರಾಘವೇಂದ್ರ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಎಂದು ಯುವತಿ ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಹಾಗೂ ತನ್ನ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ರಾಘವೇಂದ್ರ ಸಾಲ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಬಳಿಕ ವಿಚಾರಿಸಿದಾಗ ರಾಘವೇಂದ್ರಗೆ ಈಗಾಗಲೇ ಮದುವೆಯಾಗಿರುವುದು ಗೊತ್ತಾಯಿತು ಎಂದು ಹೇಳಿದ್ದಾರೆ.
ಮದುವೆ ವಿಚಾರ ಪ್ರಶ್ನಿಸಿದಾಗ ರಾಘವೇಂದ್ರ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ತನ್ನ ಮಾತು ಕೇಳದಿದ್ದರೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಲೇಔಟ್ ಠಾಣೆಗೆ ದೂರು ನೀಡಿದಾಗ ಪೊಲೀಸರು ರಾಘವೇಂದ್ರನನ್ನು ಕರೆಸಿ ಖಾಸಗಿ ಫೋಟೊಗಳನ್ನು ಡಿಲೀಟ್ ಮಾಡಿಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ಆದರೆ ಕೆಲ ದಿನಗಳ ಬಳಿಕ ಕೈ ಕೊಯ್ದುಕೊಂಡಿರುವ ಫೋಟೊ ಹಾಗೂ ಖಾಸಗಿ ಫೋಟೊಗಳನ್ನು ರಾಘವೇಂದ್ರ ಯುವತಿಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಾನು ಹೇಳಿದ ಜಾಗಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಆತ ತಿಳಿಸಿದ ಸ್ಥಳಕ್ಕೆ ಹೋದಾಗ ಕೈಗೆ ಟೊಮ್ಯಾಟೊ ಸಾಸ್ ಹಾಕಿಕೊಂಡಿರುವುದು ಗೊತ್ತಾಯಿತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲಿಂದ ವಾಪಸ್ ಬರಲು ಯತ್ನಿಸಿದಾಗ ಖಾಸಗಿ ಫೋಟೊಗಳನ್ನು ತೋರಿಸಿ ಮತ್ತೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವೇಳೆ ರಾಘವೇಂದ್ರ ಕೂಡ ಯುವತಿಯ ವಿರುದ್ಧ ಪ್ರತಿ ದೂರು ನೀಡಿದ್ದಾನೆ. ಯುವತಿ ಹಾಗೂ ಆಕೆಯ ಕುಟುಂಬದವರು ತನಗೆ ಮತ್ತು ತನ್ನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿ ನೋಟಿಸ್ ನೀಡಿದ್ದರೂ ಯುವತಿ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ, ರಾಘವೇಂದ್ರ ತನ್ನ ವಿರುದ್ಧದ ಅತ್ಯಾಚಾರ ಆರೋಪವನ್ನು ನಿರಾಕರಿಸಿದ್ದು, ಕಳೆದ ಎಂಟು ವರ್ಷಗಳಿಂದ ತಾನು ಹಾಗೂ ಯುವತಿ ಪ್ರೀತಿಯಲ್ಲಿದ್ದೆವು ಎಂದು ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಯುವತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿರುವುದು ಗೊತ್ತಾಗಿ ತಾನು ಆಕೆಯಿಂದ ದೂರವಾಗಿದ್ದೆ. ಇದೇ ಕಾರಣಕ್ಕೆ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ರಾಘವೇಂದ್ರ ಆರೋಪಿಸಿದ್ದಾನೆ. ಪ್ರಕರಣದ ಎರಡೂ ಕಡೆಯ ಆರೋಪಗಳನ್ನು ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್: A2 ಶಿವಕುಮಾರ್ ಅರ್ಜಿ ಆದೇಶ ಆ.18ಕ್ಕೆ ಪ್ರಕಟ!


















