ಬೆಂಗಳೂರು : ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಮಹಿಳೆಯೊಬ್ಬರ ಮಾಂಗಲ್ಯ ಸರ ಕಸಿದು ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ಪೀಣ್ಯ ಬಳಿಯ ದೊಡ್ಡಬಿದರಕಲ್ಲು ಬಳಿ ನಡೆದಿದೆ. ವಿಜಯಮ್ಮ ಸರ ಕಳೆದುಕೊಂಡ ಮಹಿಳೆ.
ನಿನ್ನೆ ಬೆಳಗಿನ ಜಾವ ಸುಮಾರು 5.10ಕ್ಕೆ ವಿಜಯಮ್ಮ ಅಂಗಡಿಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಬೈಕ್‌ನ ಹಿಂಬದಿ ಕುಳಿತಿದ್ದ ಆರೋಪಿ ಏಕಾಏಕಿ ಮಹಿಳೆಯ ಮೇಲೆ ಎಗರಿ ಬಿದ್ದು, ಆಕೆಯನ್ನು ಕೆಳಗೆ ಬೀಳಿಸಿದ್ದಾನೆ.
ಮಹಿಳೆ ಎಷ್ಟೇ ಕೂಗಾಡಿದರೂ ಬಿಡದೆ, ಬಾಯಿ ಮುಚ್ಚಿ ಬಲವಂತವಾಗಿ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ದಾಳಿಯಿಂದ ವಿಜಯಮ್ಮ ಅವರ ಕತ್ತು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ.
ಘಟನೆ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರೀಲ್ಸ್ ನೋಡಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ!



















