ದೇವನಹಳ್ಳಿ : ಚರ್ಚ್ ಪಾದ್ರಿಯೊಬ್ಬರು ಹಾಸ್ಟೆಲ್‌ನಲ್ಲಿ ವಾಸವಾಗಿದ್ದ 13 ವರ್ಷದ ಅಪ್ರಾಪ್ತ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಅರದೇಶನಹಳ್ಳಿ ಸಮೀಪದ ಮಾರಗೊಂಡನಹಳ್ಳಿಯಲ್ಲಿರುವ ‘ಡಿವೈನ್ ಮರ್ಸಿ ಮಮತೆಯ ಕುಟುಂಬ’ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಪಾದ್ರಿ ಜಾನ್ ಶಮೈನ್ ಎಂಬಾತ ಕಳೆದ ಮೂರು ತಿಂಗಳಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪವಿದೆ. ಹಾಸ್ಟೆಲ್‌ನ ಶೌಚಾಲಯ ಸ್ವಚ್ಛಗೊಳಿಸಲು ಬಾಲಕಿಯನ್ನು ಕಳುಹಿಸಿ, ಆಕೆಯ ಹಿಂದೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿ ತನ್ನ ಚಿಕ್ಕಮ್ಮನ ಬಳಿ ಭಾವುಕವಾಗಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಬಾರಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪಾದ್ರಿಯಿಂದ ಆದ ಲೈಂಗಿಕ ಕಿರುಕುಳವನ್ನ ಬಾಲಕಿ ತನ್ನ ಚಿಕ್ಕಮ್ಮನಿಗೆ ಘಟನೆ ಬಗ್ಗೆ ಭಾವುಕವಾಗಿ ಬೀಚಿಟ್ಟಿರುವ ಆಡಿಯೋ ವೈರಲ್ ಆಗಿದೆ.
ಬಾಲಕಿಯ ಹೇಳಿಕೆ ಆಧರಿಸಿ ಕುಟುಂಬಸ್ಥರು ಹಾಸ್ಟೆಲ್‌ಗೆ ತೆರಳಿ ವಿಚಾರಿಸಿದಾಗ, ಪಾದ್ರಿ ‘ನನಗೆ ತಿಳಿಸದೆ ಯಾಕೆ ಬಂದಿದ್ದೀರಿ’ ಎಂದು ಪೋಷಕರನ್ನೇ ಪ್ರಶ್ನಿಸಿ ಬೈದಿದ್ದಾರೆ ಎನ್ನಲಾಗಿದೆ.
ಸದ್ಯ ಘಟನಾ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪದ ಕುರಿತು ತನಿಖೆ ನಡೆಸುತ್ತಿದ್ದು, ಬಾಲಕಿಯ ಹೇಳಿಕೆ ಸೇರಿದಂತೆ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಬಂದ್ ವಾಪಸ್ ಪಡೆದ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್!



















