ನವದೆಹಲಿ : ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಜನಪ್ರಿಯ ‘ಪಿಎಂ ಇ-ಡ್ರೈವ್’ (PM E-Drive) ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ (Electric Two-Wheelers) ನೀಡಲಾಗುತ್ತಿರುವ ಸಬ್ಸಿಡಿ ಸೌಲಭ್ಯವನ್ನು ಮಾರ್ಚ್ 31, 2028ರವರೆಗೆ ವಿಸ್ತರಿಸಿ ಬೃಹತ್ ಕೈಗಾರಿಕೆಗಳ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಮೊದಲು ಮುಕ್ತಾಯಗೊಳ್ಳಬೇಕಿದ್ದ ಯೋಜನೆಯ ಸಬ್ಸಿಡಿ ಅವಧಿಯನ್ನು ಈಗ 2028ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ನಿಯಮಗಳ ಪ್ರಕಾರ, ಅರ್ಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 2,500 ರೂಪಾಯಿ ಪ್ರೋತ್ಸಾಹಧನ ಸಿಗಲಿದೆ. ಹಾಗೆಯೇ, ಪ್ರತಿ ವಾಹನಕ್ಕೆ ಗರಿಷ್ಠ ಸಬ್ಸಿಡಿ ಮಿತಿಯನ್ನು ರೂ. 5,000 ಎಂದು ನಿಗದಿಪಡಿಸಲಾಗಿದೆ.
ವಾಹನಗಳ ಬೆಲೆ ಮಿತಿ
ಸಬ್ಸಿಡಿ ಸೌಲಭ್ಯ ಪಡೆಯಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಗರಿಷ್ಠ ಬೆಲೆಯು 1.5 ಲಕ್ಷ ರೂಪಾಯಿ ಮೀರಿರಬಾರದು. ಯೋಜನೆಗಾಗಿ ಒಟ್ಟು 11,900 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಇದರಡಿ ಒಟ್ಟು 45,79,120 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ಬೆಂಬಲ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರತ್ಯೇಕವಾಗಿ ರೂ. 2,767 ಕೋಟಿ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಸಬ್ಸಿಡಿ ಅಥವಾ ಕ್ಲೇಮ್ ಗಳನ್ನು ಸಲ್ಲಿಸಲು ಡಿಸೆಂಬರ್ 31, 2027 ಕೊನೆಯ ದಿನವಾಗಿದೆ. ನಿಗದಿತ ಮೊತ್ತ ಅಥವಾ ಒಟ್ಟು ಬಜೆಟ್ ಖಾಲಿಯಾದರೆ ನಿಗದಿತ ಅವಧಿಗೂ ಮುನ್ನವೇ ಯೋಜನೆ ಅಥವಾ ಅದರ ನಿರ್ದಿಷ್ಟ ವಿಭಾಗವನ್ನು ಮುಕ್ತಾಯಗೊಳಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 545 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ



















