ನೋಯ್ಡಾ : ಉದ್ಘಾಟನೆಯಾಗಿ ಐದೇ ತಿಂಗಳಲ್ಲೇ ಉತ್ತರ ಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರ ಸುರಿದ ಭಾರೀ ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ಪಾರ್ಕಿಂಗ್ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ನಿಂತಿದ್ದು, ವಿಮಾನ ನಿಲ್ದಾಣದ ಒಳಚರಂಡಿ ವ್ಯವಸ್ಥೆಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಹಾಗೂ ವಿಪಕ್ಷಗಳಲ್ಲಿ ದೊಡ್ಡ ಮಟ್ಟದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಾರ್ಕಿಂಗ್ ಪ್ರದೇಶದ ಬಳಿ ನೀರು ತುಂಬಿ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಎಕ್ಸ್’ (ಟ್ವಿಟರ್) ಪೋಸ್ಟ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ಅವರು, “ಈ ವಿಮಾನ ನಿಲ್ದಾಣದಲ್ಲಿ ಈಗ ದೋಣಿಗಳು ಸಂಚರಿಸುತ್ತವೆಯೇ? ಬಿಜೆಪಿ ಸರ್ಕಾರ ಇರುವಲ್ಲೆಲ್ಲಾ ಭ್ರಷ್ಟಾಚಾರ ತಾಂಡವವಾಡುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಹ ಈ ದೃಶ್ಯಗಳನ್ನು ಕಂಡು “ಇದು ಅಭಿವೃದ್ಧಿಯ ಭಾಗವಾಗಿ ನಿರ್ಮಿಸಿದ ಈಜುಕೊಳ” ಎಂದು ಲೇವಡಿ ಮಾಡುತ್ತಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ
ಈ ಬಗ್ಗೆ ಸ್ಪಷ್ಟನೆ ನೀಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಅಲ್ಪಾವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಟರ್ಮಿನಲ್ ಹಾಗೂ ಪಾರ್ಕಿಂಗ್ ಸಂಪರ್ಕಿಸುವ ಮಾರ್ಗಕ್ಕೆ ನೀರು ನುಗ್ಗಿತ್ತು ಎಂದು ತಿಳಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ತುರ್ತು ರಕ್ಷಣಾ ಸಿಬ್ಬಂದಿ 30 ನಿಮಿಷಗಳ ಒಳಗಾಗಿ ನೀರನ್ನು ತೆರವುಗೊಳಿಸಿದ್ದಾರೆ. ಈ ಸಮಯದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿತ್ತು ಮತ್ತು ಯಾವುದೇ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉದ್ಘಾಟನೆಗೊಂಡ ಕೆಲವೇ ತಿಂಗಳುಗಳಲ್ಲಿ ಸವಾಲು
ಗ್ರೇಟರ್ ನೋಯ್ಡಾದ ಜೇವಾರ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ಸುಮಾರು 11,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾರ್ಚ್ 28 ರಂದು ಉದ್ಘಾಟಿಸಿದ್ದರು. ಜೂನ್ 15 ರಿಂದಷ್ಟೇ ಇಲ್ಲಿ ವಾಣಿಜ್ಯ ವಿಮಾನ ಸಂಚಾರ ಪ್ರಾರಂಭವಾಗಿತ್ತು. ಆದರೆ, ಕಾರ್ಯಾರಂಭ ಮಾಡಿದ ಕೆಲವೇ ತಿಂಗಳುಗಳಲ್ಲಿ ಇಂತಹ ಘಟನೆ ನಡೆದಿರುವುದು ಕಳಪೆ ಕಾಮಗಾರಿಯ ಆರೋಪಕ್ಕೆ ಎಡೆಮಾಡಿಕೊಟ್ಟಿದ್ದು, ಘಟನೆಯ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದೆ.
ಇದನ್ನೂ ಓದಿ : ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ; ದಶಕದ ಆಡಳಿತ ಅಂತ್ಯ



















