ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಕಾರಾಗೃಹದಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಸಿಬಿ ದಾಳಿ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದರು ಎನ್ನಲಾದ ಮೊಬೈಲ್ ಫೋನ್ ಕೂಡ ಸಿಸಿಬಿ ಅಧಿಕಾರಿಗಳ ವಶಕ್ಕೆ ಸಿಕ್ಕಿದೆ ಎನ್ನಲಾಗಿದೆ. ಇದರ ಜೊತೆಗೆ 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ವಶಕ್ಕೆ ಪಡೆದಿರುವ ಮೊಬೈಲ್‌ಗಳಲ್ಲಿ ಗಾಂಜಾ ಹಾಗೂ ಡ್ರಗ್ ಪೆಡ್ಲರ್‌ಗಳ ಜೊತೆಗಿನ ಸಂಪರ್ಕದ ಬಗ್ಗೆ ಯಾವುದೇ ಮಾಹಿತಿ ಅಥವಾ ದಾಖಲೆಗಳಿವೆಯೇ ಎಂಬುದರ ಕುರಿತು ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಎನ್ನಲಾದ ಮೊಬೈಲ್ ಸಿಸಿಬಿ ಅಧಿಕಾರಿಗಳ ವಶಕ್ಕೆ ಸಿಕ್ಕಿರುವ ಮಾಹಿತಿ ಹೊರಬರುತ್ತಿದ್ದಂತೆ, ಆ ಮೊಬೈಲ್‌ಗಳನ್ನು ಬದಲಿಸುವಂತೆ ಸಿಸಿಬಿ ಅಧಿಕಾರಿಗಳ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಒತ್ತಡ ಬರುತ್ತಿದೆ ಎಂಬ ಗುಮಾನಿಯೂ ವ್ಯಕ್ತವಾಗಿದೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ.
ಸದ್ಯ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಮೊಬೈಲ್‌ಗಳಲ್ಲಿ ಏನೆಲ್ಲಾ ಮಾಹಿತಿ ಲಭ್ಯವಾಗಿದೆ, ಯಾರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಕಾರಾಗೃಹದೊಳಗೆ ಅಕ್ರಮ ಚಟುವಟಿಕೆಗಳು ನಡೆದಿವೆಯೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ : ಬಿಡದಿ ಟೌನ್‌ಶಿಪ್ ಹೋರಾಟ ; ವಿಜಯೇಂದ್ರ ನಡೆ ಬಗ್ಗೆ ಹೆಚ್‌ಡಿಕೆ ತೀವ್ರ ಅಸಮಾಧಾನ?



















