ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ನಾಯಕರಿಂದ ನಿರೀಕ್ಷಿತ ಮಟ್ಟದ ಬೆಂಬಲ ಸಿಗದಿರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಬಿಡದಿ ಟೌನ್‌ಶಿಪ್ ವಿರುದ್ಧದ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದ್ದರೂ, ಹೋರಾಟದ ಪ್ರಮುಖ ಹಂತಗಳಲ್ಲಿ ಬಿಜೆಪಿ ನಾಯಕರ ಸಕ್ರಿಯ ಭಾಗವಹಿಸುವಿಕೆ ಕಂಡುಬರದಿರುವ ಬಗ್ಗೆ ಕುಮಾರಸ್ವಾಮಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸದಿರುವ ವಿಚಾರವೂ ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ನಡುವೆ ಸಚಿವ ಮಧು ಬಂಗಾರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಬಗ್ಗೆಯೂ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋದಲ್ಲಿ ನಡೆದಿರುವ ಮಾತುಕತೆ ಹಾಗೂ ಅದರ ರಾಜಕೀಯ ಪರಿಣಾಮಗಳ ಬಗ್ಗೆ ಕುಮಾರಸ್ವಾಮಿ ಗಮನ ಹರಿಸಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ರಾಜ್ಯ ನಾಯಕರ ನಡೆ ಹಾಗೂ ವೈರಲ್ ಆಗಿರುವ ವಿಡಿಯೋ ಕುರಿತು ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಬಿ.ವೈ. ವಿಜಯೇಂದ್ರ ಅವರ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಮೈತ್ರಿ ಪಕ್ಷವಾಗಿ ಹೋರಾಟಕ್ಕೆ ನೀಡಬೇಕಾದ ಬೆಂಬಲದ ವಿಚಾರದಲ್ಲೂ ವರಿಷ್ಠರ ಮುಂದೆ ತಮ್ಮ ನಿಲುವು ತಿಳಿಸಿದ್ದಾರೆ ಎನ್ನಲಾಗಿದೆ.
ಬಿಡದಿ ಟೌನ್‌ಶಿಪ್ ಹೋರಾಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳಾಗಿರುವ ಹಿನ್ನೆಲೆ ಎರಡೂ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ನಾಯಕರ ನಡೆ ಬಗ್ಗೆ ಜೆಡಿಎಸ್‌ನಲ್ಲಿ ಅಸಮಾಧಾನ ಮೂಡಿರುವುದು ಮೈತ್ರಿಯೊಳಗಿನ ಹೊಂದಾಣಿಕೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮೂಡಿಸಿದೆ. ಹೀಗಾಗಿ ಕುಮಾರಸ್ವಾಮಿ ಈ ಬೆಳವಣಿಗೆಗಳನ್ನು ಬಿಜೆಪಿ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ತಮಿಳುನಾಡು ಸಭಾಪತಿಯಿಂದ ಗರ್ಭಪಾತ ವಿರೋಧಿ ಹೇಳಿಕೆ : ಮತ್ತೊಂದು ವಿವಾದಕ್ಕೆ ಸಿಲುಕಿದ TVK


















