ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರವಾಗುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದ್ದು, ಆ ಅವಕಾಶ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆಗೆ ‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಎಂದು ಹೆಸರಿಡಲಾಗಿದ್ದು, ಆಗಸ್ಟ್ 16ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಪ್ರತಿ ಸೀಸನ್‌ನಲ್ಲೂ ಹೊಸತನದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಬಿಗ್‌ಬಾಸ್, ಈ ಬಾರಿ ಸಾಮಾನ್ಯ ಜನರಿಗೂ ತನ್ನ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಮತ್ತಷ್ಟು ವಿಶೇಷತೆ ಪಡೆದುಕೊಂಡಿದೆ. ಇದಕ್ಕಾಗಿ ಈಗಾಗಲೇ ಸಾಮಾನ್ಯ ಜನರಿಂದ ಮೂರು ನಿಮಿಷಗಳ ವಿಡಿಯೋಗಳನ್ನು ಆಹ್ವಾನಿಸಲಾಗಿತ್ತು. ತಮ್ಮನ್ನು ಬಿಗ್‌ಬಾಸ್ ಮನೆಗೆ ಏಕೆ ಆಯ್ಕೆ ಮಾಡಬೇಕು, ತಮ್ಮ ವಿಶೇಷತೆ ಏನು ಎಂಬುದನ್ನು ವಿಡಿಯೋದಲ್ಲಿ ತಿಳಿಸುವಂತೆ ಸೂಚಿಸಲಾಗಿತ್ತು.
ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವ ಉದ್ದೇಶದಿಂದ ಲಕ್ಷಾಂತರ ಮಂದಿ ವಿಡಿಯೋಗಳನ್ನು ಕಳುಹಿಸಿ, ಆಯ್ಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇವರಲ್ಲಿ 60 ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಇದೀಗ ಅವರನ್ನು ‘ಬಿಗ್‌ಬಾಸ್ ಅಗ್ನಿಪರೀಕ್ಷೆ’ಗೆ ಒಳಪಡಿಸಲಾಗುತ್ತಿದೆ. ಈ ಸಾಮಾನ್ಯ ಜನರ ಸಾಮರ್ಥ್ಯ ಪರೀಕ್ಷಿಸುವ ಜವಾಬ್ದಾರಿಯನ್ನು ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳೇ ಹೊತ್ತಿದ್ದಾರೆ. ಖ್ಯಾತ ನಟಿ ಶೃತಿ, ವಿನಯ್ ಗೌಡ, ನಿರಂಜನ್ ದೇಶಪಾಂಡೆ, ಚಂದನ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅಗ್ನಿಪರೀಕ್ಷೆಯ ತೀರ್ಪುಗಾರರಾಗಿ ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ.
ಆದರೆ ಈ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. ಜನಪ್ರಿಯ ಕನ್ನಡ ವಾಹಿನಿ ಕಲರ್ಸ್ ಕನ್ನಡ ಅಗ್ನಿಪರೀಕ್ಷೆಯ ಮೊದಲ ಪ್ರೋಮೋವನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪರ್ಧಿಗಳ ಧೈರ್ಯ, ತಾಳ್ಮೆ, ಸಾಮರ್ಥ್ಯ ಹಾಗೂ ಯಾವುದೇ ಸಂದರ್ಭವನ್ನು ಎದುರಿಸುವ ಮನಸ್ಥಿತಿಯನ್ನು ಪರೀಕ್ಷಿಸುವಂತಹ ಕಠಿಣ ಸವಾಲುಗಳನ್ನು ನೀಡಲಾಗಿದೆ. ಮುಖಕ್ಕೆ ಸಗಣಿ ಸವರಿಕೊಳ್ಳುವುದು, ತಲೆಯ ಕೂದಲು ಬೋಳಿಸಿಕೊಳ್ಳುವುದು ಸೇರಿದಂತೆ ಹಲವು ಸವಾಲುಗಳನ್ನು ಸ್ಪರ್ಧಿಗಳು ಎದುರಿಸಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.
ಬಿಗ್‌ಬಾಸ್‌ಗಾಗಿ ಕೆಲವರು ತಮ್ಮ ಮಿತಿಯನ್ನೇ ಮೀರಿ ಸವಾಲುಗಳನ್ನು ಸ್ವೀಕರಿಸಿದ್ದಾರೆ. ಗಿನ್ನಿಸ್ ದಾಖಲೆ ನಿರ್ಮಿಸಿರುವ ಸ್ಪರ್ಧಿಯೊಬ್ಬರು ಬಿಗ್‌ಬಾಸ್ ಅವಕಾಶಕ್ಕಾಗಿ ತಮ್ಮ ಗಿನ್ನಿಸ್ ಪ್ರಮಾಣಪತ್ರವನ್ನೇ ಹರಿದು ಹಾಕಿದ್ದಾರೆ. ಇಂತಹ ಹಲವು ಸವಾಲುಗಳ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಅಮೂಕು ದುಮುಕು ಮಂಜು ಅವರ ಮಾತುಗಳು ಅಗ್ನಿಪರೀಕ್ಷೆಯಲ್ಲಿ ಮತ್ತೊಂದು ತಿರುವು ತಂದಿವೆ.
ತೀರ್ಪುಗಾರರಾದ ಸಂಗೀತಾ ಶೃಂಗೇರಿಯನ್ನು ಇಂಪ್ರೆಸ್ ಮಾಡಬೇಕು ಎಂಬ ಸವಾಲು ನೀಡಿದಾಗ, “ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ. ಯಾರಿಗಾಗಿಯೂ ಬದಲಾಗುವುದಿಲ್ಲ” ಎಂದು ಮಂಜು ಹೇಳಿದ್ದಾರೆ. ಮಂಜು ಅವರ ಈ ಮಾತಿಗೆ ವಿನಯ್ ಗೌಡ ಕೆರಳಿ, “ಆಗಲ್ಲ ಅಂದ್ರೆ ಎದ್ದು ಹೋಗ್ತಾ ಇರು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಮಂಜು ತಮ್ಮ ನಿಲುವಿನಲ್ಲಿ ಅಚಲವಾಗಿ ನಿಲ್ಲುತ್ತಾರಾ? ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಿಗ್‌ಬಾಸ್ ಮನೆಗೆ ಪ್ರವೇಶ ಪಡೆಯುತ್ತಾರಾ? ಅಥವಾ ಕಾರ್ಯಕ್ರಮದಿಂದಲೇ ಹೊರನಡೆಯುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ.
ಸಾಮಾನ್ಯ ಜನರ ಬಿಗ್‌ಬಾಸ್ ಕನಸು, ಕಠಿಣ ಸವಾಲುಗಳು, ತೀರ್ಪುಗಾರರ ನಿರ್ಧಾರಗಳು ಹಾಗೂ ಬಿಗ್‌ಬಾಸ್ ಮನೆ ಪ್ರವೇಶಕ್ಕಾಗಿ ನಡೆಯುವ ರೋಚಕ ಪೈಪೋಟಿಯನ್ನ ನೋಡಲು ಪ್ರೇಕ್ಷಕರು ಸಜ್ಜಾಗಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಜೈಸ್ವಾಲ್


















