ಚಿಕ್ಕಬಳ್ಳಾಪುರ : ನಂದಿ ಹಿಲ್ಸ್‌ನಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್ ವೇಳೆ ದುರಂತ ಸಂಭವಿಸಿದ್ದು, ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 31 ವರ್ಷದ ಕ್ರೀಡಾಪಟು ಮೃತಪಟ್ಟಿದ್ದಾರೆ. ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ ಮೃತಪಟ್ಟ ಕ್ರೀಡಾಪಟು. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಮನ್ ದೀಪ್ ಸಿಂಗ್ ಅವರು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 21 ಕಿಲೋಮೀಟರ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅವರು, ನಂದಿ ಬೆಟ್ಟದ ಅರ್ಧ ಭಾಗದಷ್ಟು ಓಟ ಪೂರ್ಣಗೊಳಿಸಿದ್ದರು. ಓಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಅಮನ್ ಅವರನ್ನು ತಕ್ಷಣ ಮುದ್ದೇನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಂದಿ ಹಿಲ್ಸ್‌ನಲ್ಲಿ ನಡೆದ ಈ ಮ್ಯಾರಥಾನ್‌ನಲ್ಲಿ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಿದ್ದರು. ಓಟ ಆರಂಭಿಸುವ ಮುನ್ನ ಹಾಗೂ ಓಟದ ವೇಳೆ ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಅಮನ್ ದೀಪ್ ಸಿಂಗ್ ಸಾವಿಗೆ ನಿಖರ ಕಾರಣ ವೈದ್ಯಕೀಯ ಪರೀಕ್ಷೆಯ ಬಳಿಕ ಸ್ಪಷ್ಟವಾಗಬೇಕಿದೆ.
ಮ್ಯಾರಥಾನ್‌ಗೆ ಮುನ್ನ ಅಮನ್ ದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ‘ದೇವರು ನನ್ನ ಜೊತೆ ಇದ್ದಾನೆ’ ಎಂದು ಬರೆದುಕೊಂಡಿದ್ದರು. ಉತ್ಸಾಹದಿಂದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಯುವ ಕ್ರೀಡಾಪಟು ಓಟದ ವೇಳೆಯೇ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸಹ ಕ್ರೀಡಾಪಟುಗಳಲ್ಲಿ ಆಘಾತ ಮೂಡಿಸಿದೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ ತಂಡ ಬದಲಾವಣೆ ಇನ್ನೂ ದೂರ ಎಂದ ಅಶ್ವಿನ್!



















