ಭುವನೇಶ್ವರ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಅದರ ವಿರುದ್ಧ ನಡೆದ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ ಅವರು ಇದೇ ಮೊದಲ ಬಾರಿಗೆ ಈ ಕುರಿತು ಮೌನ ಮುರಿದಿದ್ದಾರೆ. ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿರುವ ವಿದ್ಯಾರ್ಥಿ ದಂಗೆ ಮತ್ತು ಪ್ರತಿಭಟನೆಗಳ ಹಿಂದೆ ಯುವ ಪೀಳಿಗೆಯನ್ನು (Gen Z) ಹಾದಿ ತಪ್ಪಿಸುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
ಸಚಿವ ಸ್ಥಾನಕ್ಕಿಂತ ದೇಶದ ಯುವಕರ ಭವಿಷ್ಯವೇ ಮುಖ್ಯ
ಭುವನೇಶ್ವರದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ರಾಜೀನಾಮೆ ನೀಡಿದ ಎರಡು ವಾರಗಳ ಬಳಿಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಜೆನ್ ಝೀ ಪೀಳಿಗೆಯ ಯುವಕರು ನಮ್ಮದೇ ಮಕ್ಕಳು. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅವರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಿದರು. ನನಗೆ ಸಚಿವ ಸ್ಥಾನ ಅಥವಾ ಅಧಿಕಾರ ಎಂದಿಗೂ ಮುಖ್ಯವಾಗಿರಲಿಲ್ಲ. ದೇಶದಲ್ಲಿ ಪ್ರತಿ ವರ್ಷ ಕೋಟ್ಯಂತರ ಮಕ್ಕಳು ಜನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವನ್ನು ‘ವಿಶ್ವಗುರು’ ಮಾಡುವ ಶಕ್ತಿ ಅವರಲ್ಲಿದೆ. ಘಟನೆಯ ನೈತಿಕ ಹೊಣೆ ಹೊತ್ತು ನಾನೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದೆ” ಎಂದು ಅವರು ಹೇಳಿದರು.
ನವೀನ್ ಪಟ್ನಾಯಕ್, ಬಿಜೆಡಿ ವಿರುದ್ಧ ಪ್ರಧಾನ್ ವಾಗ್ದಾಳಿ
ರೈರಾಖೋಲ್‌ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಬಿಜು ಜನತಾ ದಳ (ಬಿಜೆಡಿ) ಪಕ್ಷದ ವಿರುದ್ಧ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಬಿಜೆಡಿ ಕಾರ್ಯಕರ್ತರು ನಡೆಸಿದ ‘ಧರ್ಮೇಂದ್ರ ಪ್ರಧಾನ್ ವಾಪಸ್ ಹೋಗಿ’ ಎಂಬ ಕಪ್ಪು ಬಾವುಟ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, “ನಾನು ರೈತನ ಮಗ. ಎಷ್ಟು ಬಾರಿ ವಾಪಸ್ ಹೋಗಿ ಎಂದರೂ ನಾನು ಮತ್ತೆ ಸಾರ್ವಜನಿಕ ಸೇವೆಗೆ ಬಂದೇ ಬರುತ್ತೇನೆ. ನವೀನ್ ಪಟ್ನಾಯಕ್ ಅವರು ನನ್ನನ್ನು ಒಡಿಶಾದ ಜನತೆಗೆ ತಂದಿಟ್ಟ ಕಳಂಕ ಎಂದು ಕರೆಯುತ್ತಿದ್ದಾರೆ. ಆದರೆ ನನ್ನ ಜೀವಮಾನದಲ್ಲಿ ಒಡಿಶಾದ ಕೀರ್ತಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ, ಮಾಡುವುದೂ ಇಲ್ಲ” ಎಂದು ಗುಡುಗಿದರು.
ತಿರುಗೇಟು ನೀಡಿದ ಬಿಜು ಜನತಾ ದಳ
ಧರ್ಮೇಂದ್ರ ಪ್ರಧಾನ್ ಅವರ ಈ ಹೇಳಿಕೆಗಳಿಗೆ ಬಿಜೆಡಿ ನಾಯಕ ಮತ್ತು ಮಾಜಿ ಸಚಿವ ರೋಹಿತ್ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನ್ ಅವರನ್ನು ಯಾರೂ ನಿಂದಿಸುತ್ತಿಲ್ಲ, ಬದಲಾಗಿ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ಅವರ ಸ್ವಂತ ಸರ್ಕಾರವೇ ಅವರಿಗೆ ಅಪಖ್ಯಾತಿ ತಂದಿದೆ ಎಂದು ತಿರುಗೇಟು ನೀಡಿದ್ದಾರೆ. ಪರೀಕ್ಷೆಯ ಗೊಂದಲಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದು, ಸಚಿವರು ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಇತರರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಬಿಜೆಡಿ ಆರೋಪಿಸಿದೆ.
ಇದನ್ನೂ ಓದಿ : ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ : 7 ತಿಂಗಳ ಬಳಿಕ ಪತಿಯ ಬಂಧನ!



















