ಚೆನ್ನೈ : ತಮಿಳುನಾಡಿನಲ್ಲಿ ಇಂದು ಬೆಳಗ್ಗೆ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ, ಖ್ಯಾತ ನಟಿ ತ್ರಿಷಾ ವಿರುದ್ಧ ಅಸಭ್ಯ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನ ಅವರ ನಿವಾಸದಲ್ಲೇ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಮುಗುಳುನಗುತ್ತಲೇ ಹೊರಬಂದ ಉದಯನಿಧಿ, ಈ ಬಂಧನವನ್ನು ಒಂದು “ಜೋಕ್” ಎಂದು ಬಣ್ಣಿಸಿದ್ದು, ಪ್ರಕರಣವನ್ನು ಕಾನೂನಾತ್ಮಕವಾಗಿಯೇ ಎದುರಿಸುವುದಾಗಿ ಸವಾಲು ಹಾಕಿದ್ದಾರೆ.
ಆಗಿದ್ದೇನು?
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ಸೋಮವಾರ ನಡೆದ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ತಮಿಳುನಾಡಿಗೆ ಒಂದು ಹನಿ ಕಾವೇರಿ ನೀರು ಸಿಗದಿದ್ದರೂ ಸಿಎಂಗೆ ಯಾವುದೇ ಕಾಳಜಿ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದರು. ಈ ಭಾಷಣದ ಮಧ್ಯೆ ಸಭಿಕರ ಸಾಲಿನಿಂದ ಯಾರೋ “ತ್ರಿಷಾ, ತ್ರಿಷಾ” ಎಂದು ಜೋರಾಗಿ ಕೂಗಿದ್ದಾರೆ. ಈ ವೇಳೆ ಭಾಷಣವನ್ನು ಕ್ಷಣಕಾಲ ತಡೆದ ಉದಯನಿಧಿ, ನಗುತ್ತಲೇ ಅಸಭ್ಯ ಹಾಗೂ ದ್ವಂದ್ವಾರ್ಥದ ಮಾತುಗಳನ್ನು ಆಡಿದ್ದು, ಈ ವಿಡಿಯೋ ಹಾಗೂ ಹೇಳಿಕೆ ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಾಡ್ಗಿಚ್ಚಿಗೆ ಕಾರಣವಾಗಿದೆ.
ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ದೂರು
ಡಿಎಂಕೆ ನಾಯಕನ ಈ ನಡೆಗೆ ತಮಿಳಗ ವೆಟ್ರಿ ಕಳಗಂ (TVK) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉದಯನಿಧಿ ಅವರ ನಿಂದನಾತ್ಮಕ ಮಾತುಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ನೀಡಿರುವ ಟಿವಿಕೆ, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಬಗ್ಗೆ ಈ ರೀತಿ ನಿಂದನಾತ್ಮಕ ಮಾತುಗಳನ್ನು ಆಡಿರುವುದು, ಆಕೆಯನ್ನು ವಸ್ತುವಾಗಿ ಬಿಂಬಿಸುವುದು ಸಮಾಜಕ್ಕೆ ಅತ್ಯಂತ ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜಕೀಯ ಸೇಡಿನ ಆರೋಪ ತಳ್ಳಿದ ಟಿವಿಕೆ
ಈ ಬಂಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಟಿವಿಕೆ ನಾಯಕ ಅಮೆರಿಕೈ ನಾರಾಯಣನ್, ಇದು ರಾಜಕೀಯ ದ್ವೇಷದ ಬಂಧನ ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಉದಯನಿಧಿ ಅವರನ್ನು ಮುಖ್ಯಮಂತ್ರಿ ವಿಜಯ್ ಅಥವಾ ಟಿವಿಕೆ ವಿರುದ್ಧ ಮಾತನಾಡಿದ್ದಕ್ಕೆ ಬಂಧಿಸಿಲ್ಲ, ಬದಲಿಗೆ ಸಾರ್ವಜನಿಕವಾಗಿ ಮಹಿಳೆಯೊಬ್ಬರಿಗೆ ಅಪಮಾನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ ಟೆಸ್ಟ್ ಸರಣಿಯಿಂದ ಬುಮ್ರಾ ಔಟ್ ; ಬಿಸಿಸಿಐ ಗಾಯ ನಿರ್ವಹಣೆಯಲ್ಲಿ ಎಡವಿತೇ?


















