ಗಾಜಿಯಾಬಾದ್ : ಮನೋವೈದ್ಯೆಯೊಬ್ಬರು ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮೃತ ವೈದ್ಯೆಯನ್ನು 40 ವರ್ಷದ ಡಾ. ಹೇಮಿಕಾ ಅಗರ್ವಾಲ್ ಎಂದು ಗುರುತಿಸಲಾಗಿದೆ.
ರಾಜ್ ನಗರ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿರುವ ಆಫೀಸರ್ಸ್ ಸಿಟಿ-2 ಸೊಸೈಟಿಯ ತಮ್ಮ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಜಿಗಿದು ಅವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದಾಗಿ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ವಿಚ್ಛೇದನದ ಬಳಿಕ ತೀವ್ರ ಖಿನ್ನತೆಗೆ ಜಾರಿದ್ದ ಹೇಮಿಕಾ
ಸುಮಾರು ಒಂದೂವರೆ ವರ್ಷದ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದ ಡಾ. ಹೇಮಿಕಾ, ಅಂದಿನಿಂದಲೇ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಮೃತ ಹೇಮಿಕಾ ಅವರ ತಂದೆ, ಗಾಜಿಯಾಬಾದ್‌ನ ಪ್ರಸಿದ್ಧ ಮನೋವೈದ್ಯ ಡಾ. ಆರ್. ಚಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಕಳೆದ 18 ತಿಂಗಳ ಹಿಂದೆ ವೈವಾಹಿಕ ಜೀವನ ಅಂತ್ಯಗೊಂಡ ಬಳಿಕ ನನ್ನ ಮಗಳು ತೀವ್ರವಾದ ಮಾನಸಿಕ ತುಮುಲ ಹಾಗೂ ಖಿನ್ನತೆಗೆ ಜಾರಿದ್ದಳು. ಈ ಬೇರ್ಪಡುವಿಕೆ ಆಕೆಯ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು” ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತೀವ್ರಗೊಂಡ ತನಿಖೆ
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ (ಆತ್ಮಹತ್ಯಾ ಪತ್ರ) ಪತ್ತೆಯಾಗಿರುವ ಬಗ್ಗೆ ಪೊಲೀಸರು ಅಧಿಕೃತವಾಗಿ ಖಚಿತಪಡಿಸಿಲ್ಲ. ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದ್ದು, ಕುಟುಂಬ ಸದಸ್ಯರ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪ್ರಾಥಮಿಕ ತನಿಖೆಯ ಅಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ರಾಂಚಿಯಲ್ಲಿ ವಿದ್ಯಾರ್ಥಿಗಳಿಂದ ‘ಜಂತರ್ ಮಂತರ್’ ಮಾದರಿ ಹೋರಾಟ : ಸಿಜೆಪಿ ಬೆಂಬಲ



















